ಅಂಡಮಾನ್: ಅಪಘಾತಕ್ಕೀಡಾಗಿರುವ ಗಾಯಾಳುವನ್ನು ಏರ್ ಲಿಫ್ಟ್ ಮಾಡಲಾಗದೆ ಪರದಾಡುತ್ತಿರುವ ಕುಟುಂಬ
ನೆರವಿಗಾಗಿ ಪದೇ ಪದೇ ಕರೆ ಮಾಡಿದರೂ ಸ್ಪಂದಿಸದ ಸರಕಾರಿ ಪ್ರಾಧಿಕಾರಗಳು

ಸಾಂದರ್ಭಿಕ ಚಿತ್ರ | Photo : AI
ಪೋರ್ಟ್ ಬ್ಲೇರ್: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಜೀವನ್ಮರಣದ ಹೋರಾಟ ನಡೆಸುತ್ತಿರುವ ಯುವಕನನ್ನು ಚಿಕಿತ್ಸೆಗಾಗಿ ತಕ್ಷಣವೇ ಚೆನ್ನೈಗೆ ಏರ್ ಲಿಫ್ಟ್ ಮಾಡಲಾಗದೆ ಕುಟುಂಬವೊಂದು ಪರದಾಡುತ್ತಿದೆ. ಗಾಯಾಳುವಿನ ಕುಟುಂಬದ ಸದಸ್ಯರು ನೆರವಿಗಾಗಿ ಪದೇ ಪದೇ ಕರೆ ಮಾಡುತ್ತಿದ್ದರೂ, ಯಾವುದೇ ಸರಕಾರಿ ಪ್ರಾಧಿಕಾರಗಳು ಸೂಕ್ತ ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಶುಕ್ರವಾರ ಅಂಡಮಾನ್ ನ ತುಶ್ನಾಬಾದ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ಎಸ್ಎಸ್ವಿ ಸಾರಿಗೆ ಸಂಸ್ಥೆಯ ಬಸ್ ಒಂದು ಸಂತ್ರಸ್ತ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ, ಆತ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಪೋರ್ಟ್ ಬ್ಲೇರ್ ನ ಜಿ.ಬಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಕಳೆದ 24 ಗಂಟೆಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಮುಂದಿನ 48 ಗಂಟೆಗಳು ಅತ್ಯಂತ ಮಹತ್ವದ್ದಾಗಿದ್ದು, ಸುಧಾರಿತ ಚಿಕಿತ್ಸೆಗಾಗಿ ಯುವಕನನ್ನು ಚೆನ್ನೈಗೆ ಸ್ಥಳಾಂತರಿಸಬೇಕು ಎಂದು ಯುವಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಯುವಕನನ್ನು ತಕ್ಷಣವೇ ಸ್ಥಳಾಂತರಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಕುಟುಂಬದ ಸದಸ್ಯರು ಪರದಾಡುತ್ತಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗಾಯಾಳು ಯುವಕನ ಸಂಬಂಧಿಯಾದ ಶಾರೂಖ್ ಸಯ್ಯದ್, ತುರ್ತು ನೆರವಿಗಾಗಿ ಮೊರೆ ಇಟ್ಟಿದ್ದಾರೆ. ಅಂಡಮಾನ್ ನಿಂದ ಸ್ಟ್ರೆಚರ್ ರೋಗಿಗಳನ್ನು ಸಾಗಿಸಲು ಏರ್ ಲಿಫ್ಟ್ ಆಯ್ಕೆಯ ಕೊರತೆ ಇರುವ ಬಗ್ಗೆ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಯಾರಾದರೂ ಮಧ್ಯಪ್ರವೇಶಿಸಿ, ವೈದ್ಯಕೀಯ ತೆರವಿಗೆ ನೆರವು ನೀಡಬಹುದು ಎಂಬ ಆಶಯದೊಂದಿಗೆ ಅವರು ವಿವಿಧ ಸರಕಾರಿ ಪ್ರಾಧಿಕಾರಗಳು, ವಿಮಾನ ಯಾನ ಸಂಸ್ಥೆಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳನ್ನು ತಮ್ಮ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
ಸಯ್ಯದ್ ಪ್ರಕಾರ, ಶುಲ್ಕ ಪಾವತಿ ಹಾಗೂ ಅಗತ್ಯ ಔಪಚಾರಿಕತೆಯನ್ನು ಪೂರೈಸಿದ ಕನಿಷ್ಠ 48 ಗಂಟೆಗಳ ನಂತರ ಏರ್ ಲಿಫ್ಟ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಸದಸ್ಯರಿಗೆ ತಿಳಿಸಿರುವ ಇಂಡಿಗೊ ವಿಮಾನ ಯಾನ ಸಂಸ್ಥೆ, ಈ ವ್ಯವಸ್ಥೆಯು ಆಸನದ ಲಭ್ಯತೆಯನ್ನು ಅವಲಂಬಿಸಿರಲಿದೆ ಎಂಬ ಷರತ್ತನ್ನೂ ವಿಧಿಸಿದೆ ಎನ್ನಲಾಗಿದೆ. ಈ ನಡುವೆ, ಏರ್ ಲಿಫ್ಟ್ ಪ್ರಕ್ರಿಯೆಗೆ 72 ಗಂಟೆ ತಗುಲಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದ್ದರೂ, ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಕೌಂಟರ್ ನ ಗ್ರಾಹಕ ಸೇವಾ ವಿಭಾಗ ಅಥವಾ ಸಿಬ್ಬಂದಿಗಳಿಂದ ಕುಟುಂಬದ ಸದಸ್ಯರಿಗೆ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಹೇಳಲಾಗಿದೆ.
ಈ ಹಿಂದೆ ಸ್ಟ್ರೆಚರ್ ಸೌಲಭ್ಯವನ್ನು ಒದಗಿಸುತ್ತಿದ್ದ ಏರ್ ಇಂಡಿಯಾ, ಈಗ ಆ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದರಿಂದ, ಗಾಯಾಳು ಯುವಕನ ಕುಟುಂಬದ ಸದಸ್ಯರ ಬಳಿ ಬೆರಳೆಣಿಕೆ ಆಯ್ಕೆಗಳು ಮಾತ್ರ ಉಳಿದುಕೊಂಡಿವೆ. ಈ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿರುವ ಮತ್ತೊಂದು ವಿಮಾನ ಯಾನ ಸಂಸ್ಥೆ ಆಕಾಸ ಏರ್, ಸ್ಟ್ರೆಚರ್ ಸೌಲಭ್ಯವನ್ನು ಒದಗಿಸುತ್ತಿಲ್ಲ.
“ನಮಗೆ ತುರ್ತು ನೆರವು ಬೇಕಿದೆ. ನಾವು ಈಗಾಗಲೇ ವೈದ್ಯಕೀಯ ದಾಖಲೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರೂ, ಸಮಯ ಮಾತ್ರ ಕೈಮೀರುತ್ತಿದೆ. ಒಂದು ವೇಳೆ ಯಾರಾದರೂ ತುರ್ತು ವೈದ್ಯಕೀಯ ಸ್ಥಳಾಂತರವನ್ನು ವ್ಯವಸ್ಥೆಗೊಳಿಸುವವರಿದ್ದರೆ, ದಯವಿಟ್ಟು ನನ್ನನ್ನು ಸಂಪರ್ಕಿಸಿ” ಎಂದು ತಮ್ಮ ಪೋಸ್ಟ್ ನಲ್ಲಿ ಸಯ್ಯದ್ ಮನವಿ ಮಾಡಿದ್ದಾರೆ.
ಅವರು ತಮ್ಮ ಪೋಸ್ಟ್ ನಲ್ಲಿ ನಟರಾದ ಅಕ್ಷಯ್ ಕುಮಾರ್, ಶಾರೂಖ್ ಖಾನ್ ಹಾಗೂ ಸೋನು ಸೂದ್ ಅಲ್ಲದೆ, ಅಂಡಮಾನ್ ಮೂಲದ ರಾಜಕಾರಣಿಗಳು ಹಾಗೂ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದಾರೆ. ನಾಗರಿಕ ವಿಮಾನ ಯಾನ ಸಚಿವಾಲಯ, ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಚೇರಿಗಳಿಗೆ ಕರೆಗಳನ್ನೂ ಮಾಡಲಾಗಿದ್ದು, ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.
ಆದರೆ, ಇಲ್ಲಿಯವರೆಗೆ ಯಾವುದೇ ಸಮರ್ಪಕ ಪರಿಹಾರ ದೊರೆತಿಲ್ಲ. ಗಾಯಾಳು ಯುವಕನ ಕುಟುಂಬದ ಸದಸ್ಯರು ತ್ವರಿತ ಕ್ರಮಕ್ಕೆ ಮೊರೆ ಇಡುವುದನ್ನು ಮುಂದುವರಿಸಿದ್ದು, ತೀರಾ ತಡವಾಗುವುದಕ್ಕೂ ಮುನ್ನ, ವೈದ್ಯಕೀಯ ತೆರವಿನಲ್ಲಿ ತಜ್ಞತೆ ಹೊಂದಿರುವ ಪ್ರಾಧಿಕಾರಗಳು ಅಥವಾ ಸಂಸ್ಥೆಗಳು ತಮ್ಮ ನೆರವಿಗೆ ಮುಂದಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.







