ಶಿಕ್ಷಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ ಶಿಕ್ಷಕನನ್ನು ವಜಾಗೊಳಿಸಿದ Unacademy

ಕರನ್ ಸಾಂಗ್ವಾನ್ (Photo: Twitter)
ಹೊಸದಿಲ್ಲಿ: ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ Unacademy ಯು ಶಿಕ್ಷಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ ಶಿಕ್ಷಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದೆ. ವಜಾಗೊಂಡಿರುವ ಶಿಕ್ಷಕನನ್ನು ಕರನ್ ಸಾಂಗ್ವಾನ್ ಎಂದು ಗುರುತಿಸಲಾಗಿದೆ.
ಸೇವೆಯಿಂದ ವಜಾಗೊಂಡಿರುವ ಸಾಂಗ್ವಾನ್, ತಮ್ಮದೇ ಯೂಟ್ಯೂಬ್ ವಾಹಿನಿಯನ್ನು ಪ್ರಾರಂಭಿಸಿದ್ದು, ವಿವಾದದ ಕುರಿತ ವಿವರಗಳನ್ನು ಆಗಸ್ಟ್ 19ರಂದು ಪೋಸ್ಟ್ ಮಾಡುವೆ ಎಂದು ಪ್ರಕಟಿಸಿದ್ದಾರೆ.
“ಕಳೆದ ಕೆಲವು ದಿನಗಳಿಂದ ಒಂದು ವಿಡಿಯೊ ವೈರಲ್ ಆಗಿರುವುದರಿಂದ ನಾನು ವಿವಾದಕ್ಕೆ ಸಿಲುಕಿದ್ದೇನೆ ಮತ್ತು ಈ ವಿವಾದದ ಕಾರಣಕ್ಕೆ ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನನ್ನ ಹಲವಾರು ವಿದ್ಯಾರ್ಥಿಗಳು ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರೊಂದಿಗೆ ನಾನೂ ಕೂಡಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ” ಎಂದು ಸಾಂಗ್ವಾನ್ ಹೇಳಿಕೊಂಡಿದ್ದಾರೆ.
ಆ ವಿವಾದಾತ್ಮಕ ವಿಡಿಯೊದಲ್ಲಿ, ಮುಂದಿನ ಬಾರಿ ಶಿಕ್ಷಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಸಾಂಗ್ವಾನ್ ಮನವಿ ಮಾಡುತ್ತಿರುವುದು ಸೆರೆಯಾಗಿದೆ.
ಈ ವಿವಾದದ ಕುರಿತ ಪ್ರಶ್ನೆಗಳಿಗೆ Unacademy ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





