ಹದಗೆಟ್ಟ ಹೆದ್ದಾರಿಗೆ ಟೋಲ್ ವಿಧಿಸುವುದು ಅನ್ಯಾಯ : ಜಮ್ಮು,ಕಾಶ್ಮೀರ ಹೈಕೋರ್ಟ್

ಸಾಂದರ್ಭಿಕ ಚಿತ್ರ (PTI)
ಜಮ್ಮು,ಕಾಶ್ಮೀರ : ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದರೆ ಟೋಲ್ ಸಂಗ್ರಹವು ಅನ್ಯಾಯ ಮತ್ತು ಅಸಮಂಜಸವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಪಠಾಣ್ಕೋಟ್ನಿಂದ ಉಧಮ್ಪುರದವರೆಗಿನ ರಾಷ್ಟ್ರೀಯ ಹೆದ್ದಾರಿ-44ರ ಎರಡು ಟೋಲ್ ಪ್ಲಾಜಾಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಶುಲ್ಕದಲ್ಲಿ 80% ಕಡಿತಗೊಳಿಸುವಂತೆ ನಿರ್ದೇಶಿಸಿದೆ.
ದಿಲ್ಲಿ-ಅಮೃತಸರ-ಕತ್ರಾ ಎಕ್ಸ್ಪ್ರೆಸ್ ಯೋಜನೆಯಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಶುಲ್ಕದ ಶೇಕಡಾ 20ರಷ್ಟು ಮಾತ್ರ ಸಂಗ್ರಹಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ತಾಶಿ ರಬ್ಸ್ತಾನ್ ಮತ್ತು ನ್ಯಾಯಮೂರ್ತಿ ಎಂ ಎ ಚೌಧರಿ ಅವರನ್ನೊಳಗೊಂಡ ಪೀಠವು, ಹೆದ್ದಾರಿ ಕಳಪೆ ಸ್ಥಿತಿಯಲ್ಲಿದ್ದರೆ ಪ್ರಯಾಣಿಕರಿಂದ ಟೋಲ್ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಹೇಳಿದೆ. ಗುಣಮಟ್ಟದ ಮೂಲಸೌಕರ್ಯ ಒದಗಿಸದೆ ಪ್ರಯಾಣಿಕರಿಗೆ ಅನ್ಯಾಯವಾಗಿ ಶುಲ್ಕ ವಿಧಿಸಲಾಗುತ್ತಿದೆ. ಸುಗಮ, ಸುರಕ್ಷಿತ ಮತ್ತು ಸುಸಜ್ಜಿತ ಹೆದ್ದಾರಿಗಳಲ್ಲಿ ಮಾತ್ರ ಟೋಲ್ಗಳು ಕಾರ್ಯನಿರ್ವಹಿಸಬೇಕು ಎಂಬುದು ಮೂಲಭೂತ ಪ್ರಮೇಯವಾಗಿದೆ. ಆದರೆ ಹೆದ್ದಾರಿಯು ತಿರುವುಗಳು ಮತ್ತು ಹೊಂಡಗಳಿಂದ ಕೂಡಿದೆ. ರಸ್ತೆ ಹದಗೆಟ್ಟ ಸ್ಥಿತಿಯಲ್ಲಿದ್ದಾಗ ಟೋಲ್ಗಳನ್ನು ವಿಧಿಸುವುದನ್ನು ಮುಂದುವರಿಸುವುದು ಅನ್ಯಾಯ ಎಂದು ಹೇಳಿದೆ.
ಲಖನ್ಪುರ್, ಥಂಡಿ ಖುಯಿ ಮತ್ತು ಬಾನ್ ಟೋಲ್ ಪ್ಲಾಜಾಗಳಲ್ಲಿ ಟೋಲ್ ತೆರಿಗೆ ಪಾವತಿಯಿಂದ ವಿನಾಯಿತಿ ಕೋರಿ ಸುಗಂಧಾ ಸಾಹ್ನಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ಆದೇಶವನ್ನು ನೀಡಿದೆ.







