ಭಾರತದಲ್ಲಿ ಮಾಲಿನ್ಯ, ಉಷ್ಣಮಾರುತ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿವೆ: ಯುನಿಸೆಫ್ ವರದಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಉಷ್ಣಮಾರುತ ಮತ್ತು ವಾಯುಮಾಲಿನ್ಯದಂತಹ ಪರಿಸರ ಒತ್ತಡಗಳಿಂದಾಗಿ ಭಾರತದಲ್ಲಿ ಮಕ್ಕಳು ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದು,ಇದು ಅವರ ಆರೋಗ್ಯ, ಶಾಲಾ ಹಾಜರಾತಿ ಮತ್ತು ಒಟ್ಟಾರೆ ಕಲಿಕೆಯ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಯುನಿಸೆಫ್ ತನ್ನ ವರದಿಯಲ್ಲಿ ಹೇಳಿದೆ.
ವರದಿಯ ಪ್ರಕಾರ 2024ರೊಂದರಲ್ಲೇ ಭಾರತದಲ್ಲಿ ಸುಮಾರು 5.48 ಕೋ.ಮಕ್ಕಳು ಬಿಸಿಗಾಳಿಯಿಂದ ಬಾಧಿತರಾಗಿದ್ದರು. ಈ ಹವಾಮಾನ ವೈಪರೀತ್ಯಗಳು ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಂತಹ ಇತರ ನೈಸರ್ಗಿಕ ವಿಕೋಪಗಳೊಂದಿಗೆ ಸೇರಿಕೊಂಡು ಮಕ್ಕಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಿರುವ ಜೊತೆಗೆ ದೇಶಾದ್ಯಂತ ಶಾಲೆಗಳಿಗೆ ವ್ಯಾಪಕ ವಿನಾಶಕ್ಕೂ ಕಾರಣವಾಗಿವೆ.
ಯುನಿಸೆಫ್ ಮಕ್ಕಳ ಹವಾಮಾನ ಸೂಚ್ಯಂಕದಲ್ಲಿ 163 ದೇಶಗಳ ಪೈಕಿ 26ನೇ ಸ್ಥಾನದಲ್ಲಿರುವ ಭಾರತವು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಬಹು ಸುಲಭವಾಗಿ ತುತ್ತಾಗುತ್ತಿದೆ ವರದಿಯು ಎತ್ತಿ ತೋರಿಸಿದೆ.
ಶಾಖದ ಅಲೆಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅಪಾಯಗಳು ಹೆಚ್ಚುತ್ತಿದ್ದು,ತೀವ್ರಗೊಳ್ಳುತ್ತಿವೆ. ಇದು ಮಕ್ಕಳಿಗೆ ಸುರಕ್ಷಿತ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಕಷ್ಟಸಾಧ್ಯವಾಗಿಸಿದೆ ಎಂದಿರುವ ವರದಿಯು,ಶಾಖದ ಅಲೆಗಳು ಮತ್ತು ಮಾಲಿನ್ಯ ಮಕ್ಕಳ ದೈಹಿಕ ಆರೋಗ್ಯಕ್ಕೆ ಗಂಭೀರ ಅಪಾಯಗಳನ್ನು ಒಡ್ಡಿವೆ ಮತ್ತು ಅವರ ಶಾಲಾ ಶಿಕ್ಷಣಕ್ಕೆ ಅಡ್ಡಿಯನ್ನುಂಟು ಮಾಡುವ ಕಾಯಿಲೆಗಳಿಗೂ ಕಾರಣವಾಗುತ್ತಿವೆ ಎಂದು ಹೇಳಿದೆ.
ರಾಷ್ಟ್ರೀಯ ಪಠ್ಯಕ್ರಮದಲ್ಲಿ ಹವಾಮಾನ ಬದಲಾವಣೆ ಶಿಕ್ಷಣವನ್ನು ಸಂಯೋಜಿಸಲು ತಾನು ಭಾರತ ಸರಕಾರದೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದು,ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಜಾಗ್ರತಿಯನ್ನು ಮೂಡಿಸುವ ಮತ್ತು ಹವಾಮಾನ ಸಂಬಂಧಿ ಸವಾಲುಗಳನ್ನು ಎದುರಿಸಲು ಅವರನ್ನು ಸನ್ನದ್ಧರಾಗಿಸುವ ಗುರಿಯನ್ನು ಹೊಂದಿದೆ ಎಂದು ಯುನಿಸೆಫ್ ಹೇಳಿದೆ.
ಯುನಿಸೆಫ್ ಅಥವಾ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ಮಕ್ಕಳ ಜೀವನಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಈ ಪ್ರಯತ್ನದ ಭಾಗವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಈಗ ಹವಾಮಾನ ಬದಲಾವಣೆ ಶಿಕ್ಷಣದ ಅಂಶಗಳನ್ನು ಒಳಗೊಂಡಿದ್ದು, ರಾಜ್ಯಗಳ ಪಠ್ಯಕ್ರಮಗಳು,ಪಠ್ಯಪುಸ್ತಕಗಳು ಮತ್ತು ಬೋಧನಾ ವಿಧಾನಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿದೆ.
ಇದರ ಜೊತೆಗೆ 12 ರಾಜ್ಯಗಳಲ್ಲಿ ಸರಕಾರದಿಂದ ಸಮಗ್ರ ಶಾಲಾ ಸುರಕ್ಷತಾ ಕಾರ್ಯಕ್ರಮಗಳ ಅನುಷ್ಠಾನವನ್ನೂ ಬೆಂಬಲಿಸುತ್ತಿದೆ. 2024ರ ವೇಳೆಗೆ 1,21,000ಕ್ಕೂ ಅಧಿಕ ಶಿಕ್ಷಕರು ಈ ಕಾರ್ಯಕ್ರಮಗಳಡಿ ತರಬೇತಿ ಪಡೆದಿದ್ದಾರೆ.
ಜಾಗತಿಕ ಮಟ್ಟದಲ್ಲಿ 2024ರಲ್ಲಿ ಶಾಖದ ಅಲೆಗಳು ಅತ್ಯಂತ ಮಹತ್ವದ ಹವಾಮಾನ ಅಪಾಯವಾಗಿದ್ದು, ಅಂದಾಜು 17.10 ಕೋ.ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು ಎಂದು ವರದಿಯು ಹೇಳಿದೆ. ಇದು ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮಗಳಿಂದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣವನ್ನು ರಕ್ಷಿಸಲು ಕ್ರಮದ ತುರ್ತು ಅಗತ್ಯವನ್ನು ನೆನಪಿಸುತ್ತದೆ ಎಂದು ವರದಿಯು ಬೆಟ್ಟು ಮಾಡಿದೆ.







