ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನಟಿ ಕೀರ್ತಿ ಸುರೇಶ್ ನೇಮಕ

ನಟಿ ಕೀರ್ತಿ ಸುರೇಶ್
ಹೊಸದಿಲ್ಲಿ, ನ. 16: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾದ ಸೆಲೆಬ್ರೆಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ರವಿವಾರ ತಿಳಿಸಿದೆ.
ತಮಿಳು, ತೆಲುಗು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಮೆಚ್ಚುಗೆ ಪಡೆದ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ಕೀರ್ತಿ ಸುರೇಶ್ ಅವರು ಈಗ ದುರ್ಬಲ ಮಕ್ಕಳಿಗಾಗಿ ಯುನಿಸೆಫ್ ಮಾಡುತ್ತಿರುವ ಕೆಲಸವನ್ನು ಬೆಂಬಲಿಸುವ ವ್ಯಕ್ತಿಗಳ ವಿಶೇಷ ಗುಂಪಿನ ಭಾಗವಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಅವರು ಈಗ ಮಾನಸಿಕ ಆರೋಗ್ಯ, ಶಿಕ್ಷಣ ಹಾಗೂ ಲಿಂಗ ಸಮಾನತೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೀರ್ತಿ ಸುರೇಶ್, ಮಕ್ಕಳು ನಮ್ಮ ಅತಿ ದೊಡ್ಡ ಜವಾಬ್ದಾರಿ ಹಾಗೂ ಭರವಸೆ. ಪೋಷಣೆ, ಪ್ರೀತಿಯ ಆರೈಕೆಯು ಮಕ್ಕಳು ಸಂತೋಷ, ಆರೋಗ್ಯಕರ ಮತ್ತು ತೃಪ್ತಿಕರ ಜೀವನ ನಡೆಸಲು ಅಗತ್ಯವಾಗಿರುವ ಸಾಮಾಜಿಕ ಹಾಗೂ ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಡಿಪಾಯ ನಿರ್ಮಿಸುತ್ತದೆ. ಇದು ನನಗೆ ಸಿಕ್ಕ ಒಂದು ದೊಡ್ಡ ಗೌರವವಾಗಿದೆ ಎಂದಿದ್ದಾರೆ.





