ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ಅವರ ʼಇಂಡಿಯಾ@100’ ಪುಸ್ತಕಕ್ಕೆ 7.25 ಕೋಟಿ ರೂ. ವ್ಯಯಿಸಿ ಸಂಕಷ್ಟಕ್ಕೆ ಸಿಲುಕಿದ ಯೂನಿಯನ್ ಬ್ಯಾಂಕ್ : ವರದಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹೊಸದಿಲ್ಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 7.25 ಕೋಟಿ ರೂ. ಮೊತ್ತವನ್ನು ʼಇಂಡಿಯಾ@100’ ಪುಸ್ತಕ ಖರೀದಿಗೆ ವ್ಯಯಿಸಿ ಸಂಕಷ್ಟಕ್ಕೆ ಸಿಲುಕಿದೆ ಎಂದು Economic Times ವರದಿ ಮಾಡಿದೆ.
ಕಳೆದ ವರ್ಷ ಪುಸ್ತಕ ಬಿಡುಗಡೆಗೆ ಮೊದಲು ಸುಮಾರು ಎರಡು ಲಕ್ಷ ಪ್ರತಿಗಳಿಗೆ 7.25 ಕೋಟಿ ರೂ. ಖರ್ಚು ಮಾಡಿದ್ದಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದೆ. ಅವುಗಳನ್ನು ಗ್ರಾಹಕರು, ಸ್ಥಳೀಯ ಶಾಲೆಗಳು, ಕಾಲೇಜುಗಳು, ಗ್ರಂಥಾಲಯಗಳು ಮತ್ತು ಇತರರಿಗೆ ವಿತರಿಸಲು ಉದ್ದೇಶಿಸಿತ್ತು.
ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ(ಸಿಇಎ) ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ಅವರ ಇಂಡಿಯಾ@100: ಎನ್ವಿಶನಿಂಗ್ ಟುಮಾರೋಸ್ ಎಕನಾಮಿಕ್ ಪವರ್ಹೌಸ್(India@100: Envisioning Tomorrow’s Economic Powerhouse) ಪುಸ್ತಕ ಖರೀದಿ ವಿವಾದದಲ್ಲಿದೆ.
ವಿ ಸುಬ್ರಮಣಿಯನ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ನಾಮನಿರ್ದೇಶಿತ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವಾರ ಅವರ ಅಧಿಕಾರಾವಧಿಯನ್ನು ಸರಕಾರ ಮೊಟಕುಗೊಳಿಸಿದೆ. ವರದಿ ಪ್ರಕಾರ, ಪುಸ್ತಕದ ಪ್ರಚಾರದ ಸುತ್ತಲಿನ ಅಕ್ರಮಗಳು ಇದಕ್ಕೆ ಒಂದು ಕಾರಣ ಎಂದು ಹೇಳಲಾಗಿದೆ.
ಕಳೆದ ಆಗಸ್ಟ್ನಲ್ಲಿ ಪುಸ್ತಕ ಪ್ರಕಟಣೆಗೆ ಮುನ್ನ, ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿರುವ ಬೆಂಬಲ ಸೇವೆಗಳ ವಿಭಾಗವು 18 ವಲಯ ಮುಖ್ಯಸ್ಥರಿಗೆ ಪುಸ್ತಕಗಳನ್ನು ಸಂಗ್ರಹಿಸಿ ವಿತರಿಸುವ ನಿರ್ಧಾರವನ್ನು ತಿಳಿಸಲು ಪತ್ರ ಬರೆದಿದೆ. ಪತ್ರಗಳಲ್ಲಿ 1,89,450 ಪ್ರತಿಗಳು, ಅದರಲ್ಲಿ ಪ್ರತಿ ವಲಯ ಕಚೇರಿಯಿಂದ 10,525 ಪ್ರತಿಗಳು, ಪ್ರತಿ ಪೇಪರ್ಬ್ಯಾಕ್ ಪುಸ್ತಕಕ್ಕೆ 350 ರೂ.ತಗುಲುತ್ತದೆ. ಪ್ರತಿ ಹಾರ್ಡ್ಕವರ್ ಪುಸ್ತಕಕ್ಕೆ 597 ರೂ.ಗಳಂತೆ 10,422 ಪ್ರತಿಗಳನ್ನು ಖರೀದಿಸಬೇಕಾಗಿತ್ತು. ಇದರ ಒಟ್ಟು ವೆಚ್ಚ 7.25 ಕೋಟಿ ರೂ.ಗಳಷ್ಟಾಗುತ್ತದೆ.
ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಎ ಮಣಿಮೇಖಲೈ ಮತ್ತು ಅಧ್ಯಕ್ಷ ಶ್ರೀನಿವಾಸನ್ ವರದರಾಜನ್ ಅವರನ್ನು Economic Times ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.







