ಕೇಂದ್ರ ಬಜೆಟ್ 2026 | ಆಯುಷ್ ಸಚಿವಾಲಯಕ್ಕೆ ಶೇ.20ರಷ್ಟು ಹೆಚ್ಚಿನ ಹಂಚಿಕೆ

ಹೊಸದಿಲ್ಲಿ, ಫೆ. 1: 2026–27ರ ಮುಂಗಡಪತ್ರದಲ್ಲಿ ಆಯುಷ್ ಸಚಿವಾಲಯಕ್ಕೆ 4,408.93 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 3,671.82 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.20ರಷ್ಟು ಏರಿಕೆಯಾಗಿದೆ. ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆಯನ್ನೂ ಸರ್ಕಾರ ಪ್ರಕಟಿಸಿದೆ.
ರವಿವಾರ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗಾಗಲೇ ವಿಶ್ವದ ಹಲವು ಭಾಗಗಳಲ್ಲಿ ಗೌರವಕ್ಕೆ ಪಾತ್ರವಾಗಿರುವ ಪ್ರಾಚೀನ ಭಾರತೀಯ ಯೋಗ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಟ್ಟಕ್ಕೆ ತೆಗೆದುಕೊಂಡು ಹೋದಾಗ ಅದು ಸಾಮೂಹಿಕ ಜಾಗತಿಕ ಮನ್ನಣೆಯನ್ನು ಪಡೆದಿತು. ಕೋವಿಡ್ ನಂತರ ಅದು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಿದರು.
ಗುಣಮಟ್ಟದ ಆಯುರ್ವೇದ ಉತ್ಪನ್ನಗಳನ್ನು ರಫ್ತು ಮಾಡುವುದು ಮೂಲಿಕೆಗಳನ್ನು ಬೆಳೆಯುವ ರೈತರಿಗೆ ಮತ್ತು ಅವುಗಳನ್ನು ಸಂಸ್ಕರಿಸುವ ಯುವಜನತೆಗೆ ನೆರವಾಗುತ್ತದೆ ಎಂದರು.
ಜಾಗತಿಕ ಬೇಡಿಕೆಯನ್ನು ಪೂರೈಸಲು ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಆಯುಷ್ ಫಾರ್ಮಸಿಗಳು ಮತ್ತು ಔಷಧಿ ಪರೀಕ್ಷಾ ಪ್ರಯೋಗಾಲಯಗಳ ಉನ್ನತೀಕರಣ, ಹೆಚ್ಚು ನುರಿತ ಸಿಬ್ಬಂದಿಯನ್ನು ಲಭ್ಯವಾಗಿಸುವುದು ಮತ್ತು ಜಾಮನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದನ್ನು ಅವರು ಪ್ರಸ್ತಾಪಿಸಿದರು.
ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ರಾಷ್ಟ್ರೀಯ ಆಯುಷ್ ಮಿಷನ್‌ಗೆ 1,300 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಹಿಂದಿನ ವರ್ಷದ 780.96 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ.66.5ರಷ್ಟು ಏರಿಕೆಯಾಗಿದೆ.
ಇದೇ ವೇಳೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಹಂಚಿಕೆಯನ್ನು ಶೇ.12ರಷ್ಟು ಹೆಚ್ಚಿಸಲಾಗಿದ್ದು, ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗೆ ಹಂಚಿಕೆಯನ್ನು 279.24 ಕೋಟಿ ರೂ.ಗಳಿಂದ 219.05 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ.







