ಬಜೆಟ್ ಹೊಡೆತಕ್ಕೆ ಕರಗಿದ ಚಿನ್ನ, ಕುಸಿದ ಬೆಳ್ಳಿ

Photo : Pixabay
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಬಳಿಕ ಚಿನ್ನದ ದರದಲ್ಲಿ ಶೇ. 3 ಹಾಗೂ ಬೆಳ್ಳಿಯ ದರದಲ್ಲಿ ಶೇ. 9ರಷ್ಟು ಕುಸಿತ ಉಂಟಾಗಿದೆ.
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಮದು ಮೇಲೆ ವಿಧಿಸಲಾಗಿದ್ದ ಕಸ್ಟಮ್ಸ್ ಡ್ಯೂಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಮದುದಾರರು ಈ ಹಿಂದಿನ ಕಸ್ಟಮ್ಸ್ ಡ್ಯೂಟಿಯನ್ನೇ ಪಾವತಿಸುವುದನ್ನು ಮುಂದುವರಿಸಲಿದ್ದಾರೆ.
ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಪ್ರಕಾರ, ಬೆಳ್ಳಿಯ ದರದಲ್ಲಿ 72,500 ರೂ. ಕುಸಿತ ಉಂಟಾಗಿ (ಶೇ. 18.85) ಪ್ರತಿ ಕೆಜಿಗೆ 3,12,000 ರೂ. ತಲುಪಿದೆ. ಗುರುವಾರ ದಾಖಲೆಯ ಬೆಲೆ ಏರಿಕೆ ಕಂಡಿದ್ದ ಬೆಳ್ಳಿ, ಪ್ರತಿ ಕೆಜಿಗೆ 4,04,500 ರೂ. ತಲುಪಿತ್ತು. ಜನವರಿ ತಿಂಗಳಲ್ಲಿ ಬಲವಾದ ಏರಿಕೆ ದಾಖಲಿಸಿದ್ದ ಬೆಳ್ಳಿಯ ದರ 73,000 ರೂ. ಅಥವಾ ಶೇ. 30.5ರಷ್ಟು ಏರಿಕೆ ಕಂಡಿತ್ತು. ಇದಕ್ಕೂ ಮುನ್ನ ಡಿಸೆಂಬರ್ 31, 2025ಕ್ಕೆ ಅಂತ್ಯಗೊಂಡಂತೆ ಬೆಳ್ಳಿಯ ದರ ಪ್ರತಿ ಕೆಜಿಗೆ 2,39,000 ರೂ.ನಷ್ಟಿತ್ತು.
ಚಿನ್ನದ ದರವೂ ದುರ್ಬಲಗೊಂಡಿದ್ದು, ಪ್ರತಿ ಹತ್ತು ಗ್ರಾಂ (ಎಲ್ಲ ತೆರಿಗೆಗಳೂ ಸೇರಿ) ಚಿನ್ನದ ದರದಲ್ಲಿ 3,500 ರೂ. ಅಥವಾ ಶೇ. 2.07ರಷ್ಟು ಕುಸಿತ ದಾಖಲಾಗಿದೆ. ಆ ಮೂಲಕ ಪ್ರತಿ 10 ಗ್ರಾಂಗೆ 1,65,000 ರೂ.ಗೆ ಇಳಿಕೆಯಾಗಿದೆ. ಇದಕ್ಕೂ ಹಿಂದಿನ ಅವಧಿಯಲ್ಲಿ ದಾಖಲೆಯ ಪ್ರತಿ 10 ಗ್ರಾಂಗೆ 1,83,000 ರೂ.ಗೆ ಏರಿಕೆ ಕಂಡಿದ್ದ ಚಿನ್ನದ ದರ, ಜನವರಿ ತಿಂಗಳಲ್ಲಿ ಶೇ. 20.2ರಷ್ಟು ವೃದ್ಧಿಯಾಗಿತ್ತು. ಕಳೆದ ವರ್ಷದ ಪ್ರತಿ 10 ಗ್ರಾಂಗೆ 1,37,700 ರೂ. ದರಕ್ಕೆ ಹೋಲಿಸಿದರೆ ಇದು ಶೇ. 20.2ರಷ್ಟು ಏರಿಕೆಯಾಗಿದೆ.







