85 ನಿಮಿಷಗಳಲ್ಲಿ ಬಜೆಟ್ ಭಾಷಣ ಕೊನೆಗೊಳಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ (Photo: PTI)
ಹೊಸದಿಲ್ಲಿ: ಮೂರು ಪ್ರಮುಖ ಕರ್ತವ್ಯ ಮಂತ್ರಗಳನ್ನು ಪಠಿಸುವ ಮೂಲಕ 2026-27ನೇ ಸಾಲಿನ ಬಜೆಟ್ ಭಾಷಣ ಪ್ರಾರಂಭಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಭಾಷಣವನ್ನು ಒಂದು ಗಂಟೆ 25 ನಿಮಿಷಗಳಲ್ಲಿ (ಒಟ್ಟು 85 ನಿಮಿಷಗಳು) ಮುಗಿಸಿದರು.
2020-21 ಸಾಲಿನ ಬಜೆಟ್ ಮಂಡನೆಯ ವೇಳೆ ಅವರು 2 ಗಂಟೆ 40 ನಿಮಿಷಗಳ ಬಜೆಟ್ ಭಾಷಣ ಮಾಡಿ, ಅತಿ ಹೆಚ್ಚು ಹೊತ್ತು ಬಜೆಟ್ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2019ರಿಂದ ಕೇಂದ್ರ ಬಜೆಟ್ ಮಂಡಿಸುತ್ತಾ ಬಂದಿರುವ ನಿರ್ಮಲಾ ಸೀತಾರಾಮನ್, ಆ ಸಾಲಿನಲ್ಲಿ 2 ಗಂಟೆ 17 ನಿಮಿಷ ಭಾಷಣ ಮಾಡಿದ್ದರು. ಅವರ ಆ ಭಾಷಣದಲ್ಲಿ ಒಟ್ಟು 10,965 ಪದಗಳಿದ್ದವು.
ಬಳಿಕ 2020ರಲ್ಲಿ 2 ಗಂಟೆ 40 ನಿಮಿಷಗಳು (13,349 ಪದಗಳು), 2021ರಲ್ಲಿ 1 ಗಂಟೆ 50 ನಿಮಿಷಗಳು (10,594 ಪದಗಳು), 2022ರಲ್ಲಿ 1 ಗಂಟೆ 32 ನಿಮಿಷಗಳು (9,064 ಪದಗಳು), 2023ರಲ್ಲಿ 1 ಗಂಟೆ 27 ನಿಮಿಷಗಳು (8,167 ಪದಗಳು), 2024ರ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ 56 ನಿಮಿಷಗಳು (5,271 ಪದಗಳು), 2024ರ ಜುಲೈನಲ್ಲಿ ಮಂಡಿಸಿದ ಪೂರ್ಣ ಬಜೆಟ್ ನಲ್ಲಿ 1 ಗಂಟೆ 22 ನಿಮಿಷ (7,904 ಪದಗಳು) ಹಾಗೂ 2025ರಲ್ಲಿ 1 ಗಂಟೆ 14 ನಿಮಿಷಗಳು (ಸುಮಾರು 7,900 ಪದಗಳು) ಭಾಷಣವನ್ನು ನಿರ್ಮಲಾ ಸೀತಾರಾಮನ್ ಮಾಡಿದ್ದರು.







