ಕೇಂದ್ರ ಬಜೆಟ್ | ಉದ್ಯೋಗಗಳ ಮೇಲೆ AI ಸಹಿತ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮದ ಮೌಲ್ಯಮಾಪನಕ್ಕೆ ಉನ್ನತಾಧಿಕಾರ ಸಮಿತಿ

ಸಚಿವೆ ನಿರ್ಮಲಾ ಸೀತಾರಾಮನ್ |Photo: PTI
ಹೊಸದಿಲ್ಲಿ: ಸೇವಾ ವಲಯದಲ್ಲಿನ ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ಉನ್ನತಾಧಿಕಾರ ಸ್ಥಾಯಿ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರಕಾರವು 2026ರ ಮುಂಗಡಪತ್ರದಲ್ಲಿ ಘೋಷಿಸಿದೆ.
2047ರ ವೇಳೆಗೆ ಜಾಗತಿಕ ಸೇವಾ ಮಾರುಕಟ್ಟೆಯಲ್ಲಿ ಶೇ.10ರಷ್ಟು ಪಾಲನ್ನು ಪಡೆಯುವ ಮಹತ್ವಾಕಾಂಕ್ಷೆಯನ್ನು ಸರಕಾರವು ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಸಮಿತಿಯು ಐಟಿ,ಹಣಕಾಸು, ಪ್ರವಾಸೋದ್ಯಮ,ಆರೋಗ್ಯ ರಕ್ಷಣೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾದರಿಗಳನ್ನು ಎಐ,ಸ್ವಯಂಚಾಲಿತ ವ್ಯವಸ್ಥೆ ಮತ್ತು ಡಿಜಿಟಲ್ ಪರಿವರ್ತನೆ ಹೇಗೆ ಮರುರೂಪಿಸುತ್ತಿವೆ ಎನ್ನುವುದನ್ನು ಅಧ್ಯಯನ ಮಾಡಲಿದೆ.
ವಿಕಸಿತ ಭಾರತದ ಪ್ರಮುಖ ಚಾಲಕ ಶಕ್ತಿಯಾಗಿ ಸೇವಾ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಲು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸು ಮಾಡಲಿದೆ. ಸಮಿತಿಯು ಬೆಳವಣಿಗೆ,ಉದ್ಯೋಗ ಮತ್ತು ರಫ್ತು ಸಾಮರ್ಥ್ಯವನ್ನು ಗರಿಷ್ಠಗೊಳಿಸುವ ಕ್ಷೇತ್ರಗಳಿಗೆ ಆದ್ಯತೆ ನೀಡಲಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಸಮಿತಿಯು ವಿಕಸಿತ ಭಾರತ ದೃಷ್ಟಿಕೋನದಡಿ ಭಾರತದ ದೀರ್ಘಕಾಲೀನ ಬೆಳವಣಿಗೆ ಕಾರ್ಯತಂತ್ರಕ್ಕೆ ಹೊಂದಿಕೆಯಾಗುವಂತೆ ಕೌಶಲ್ಯಾಭಿವೃದ್ಧಿ ಮಾರ್ಗಗಳು ಮತ್ತು ನೀತಿ ಹಸ್ತಕ್ಷೇಪಗಳನ್ನು ಶಿಫಾರಸು ಮಾಡುವ ನಿರೀಕ್ಷೆಯಿದೆ ಎಂದ ಸೀತಾರಾಮನ್,ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಆರ್ಥಿಕ ಬೆಳವಣಿಗೆಗೆ ಬಲವರ್ಧಕಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದರು.
ಸರಕಾರವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಕೃಷಿ ಕಾರ್ಯಕ್ಷಮತೆಯನ್ನು ಸುಧಾರಿಸಲು ಎಐ-ಚಾಲಿತ ಸಾಧನವನ್ನು ಕಾರ್ಯಗತಗೊಳಿಸುವುದನ್ನೂ ಪ್ರಸ್ತಾವಿಸಿದೆ.
ಉದ್ಯೋಗ ಸೃಷ್ಟಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪ್ರಯತ್ನವಾಗಿ ಮುಂಗಡಪತ್ರವು ಮಹತ್ವದ ಸ್ಥಳಗಳಿಗಾಗಿ ರಾಷ್ಟ್ರೀಯ ಡಿಜಿಟಲ್ ಜ್ಞಾನ ಜಾಲ ನಿರ್ಮಾಣವನ್ನು ಪ್ರಸ್ತಾವಿಸಿದೆ. ಈ ವೇದಿಕೆಯು ಪ್ರವಾಸಿ ತಾಣಗಳು,ಸೇವಾ ಪೂರೈಕೆದಾರರು ಮತ್ತು ಸ್ಥಳೀಯ ವ್ಯವಹಾರಗಳನ್ನು ಸಂಪರ್ಕಿಸುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಆ.15ರಿಂದ 350ಕ್ಕೂ ಅಧಿಕ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ ಸೀತಾರಾಮನ್,ರಚನಾತ್ಮಕ ಸುಧಾರಣೆಯ ಗತಿಯನ್ನು ಕಾಯ್ದುಕೊಳ್ಳುವ ಅಗತ್ಯಕ್ಕೆ ಒತ್ತು ನೀಡಿದರು. ‘ಸುಧಾರಣಾ ಎಕ್ಸ್ಪ್ರೆಸ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಅವರು ಹೇಳಿದರು.
ಇದು ‘ಯುವಶಕ್ತಿ ಚಾಲಿತ ಬಜೆಟ್’ ಆಗಿದೆ ಎಂದು ಬಣ್ಣಿಸಿದ ಸೀತಾರಾಮನ್,ಆಶಯಗಳನ್ನು ಸಾಧನೆಗಳಾಗಿ ಪರಿವರ್ತಿಸುವುದು, ಜಾಗತಿಕ ಅನಿಶ್ಚಿತತೆಯ ನಡುವೆ ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಳ್ಳುವುದು ಹಾಗೂ ಬಡವರು ಮತ್ತು ಹಿಂದುಳಿದವರಿಗೆ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವುದು ಈ ಬಜೆಟ್ನ ಗುರಿಯಾಗಿದೆ ಎಂದರು.







