ಕೇಂದ್ರ ಬಜೆಟ್ 2026: ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ? ಸಮಗ್ರ ವಿವರ ಇಲ್ಲಿದೆ...

Photo : PTI
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ 2026-27ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ರೈಲ್ವೆ, ರಕ್ಷಣೆ, ಕೃಷಿ, ಎಂಎಸ್ಎಂಇ, ಆರೋಗ್ಯ ಸೇವೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಪ್ರಮುಖ ಹಂಚಿಕೆಗಳನ್ನು ಘೋಷಿಸಿದ್ದಾರೆ. ಆದಾಯ ತೆರಿಗೆ ನಿಬಂಧನೆಗಳಲ್ಲೂ ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಿದ್ದಾರೆ.
ಬಜೆಟ್ ನಲ್ಲಿ ಸಾರಿಗೆ ಕ್ಷೇತ್ರಕ್ಕೆ ಗರಿಷ್ಠ ಅಂದರೆ 5,98,520 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ. ರಕ್ಷಣಾ ಕ್ಷೇತ್ರ 5,94,585 ಕೋಟಿ ರೂಪಾಯಿ ಪಡೆಯಲಿದ್ದು, ಅನುದಾನ ಹಂಚಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮೀಣ ಅಭಿವೃದ್ಧಿ ಕ್ಷೇತ್ರ 2,73,108 ಕೋಟಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಗೃಹ ವ್ಯವಹಾರಗಳ ಸಚಿವಾಲಯ 2,55,234 ಕೋಟಿ ರೂಪಾಯಿ ಅನುದಾನ ಹಂಚಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ 1,62,671 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಶಿಕ್ಷಣ (1,39,289 ಕೋಟಿ ರೂಪಾಯಿ), ಇಂಧನ (1,09,029 ಕೋಟಿ), ಆರೋಗ್ಯಸೇವೆ (1,04,599 ಕೋಟಿ) ಕ್ಷೇತ್ರಗಳು ಕೂಡಾ ಒಂದು ಲಕ್ಷ ಕೋಟಿಗಿಂತ ಹೆಚ್ಚಿನ ಅನುದಾನ ಪಡೆಯಲಿವೆ.
ನಗರಾಭಿವೃದ್ಧಿ (85,522 ಕೋಟಿ), ಐಟಿ ಹಾಗೂ ದೂರಸಂಪರ್ಕ (74560 ಕೋಟಿ) ಮತ್ತು ವಾಣಿಜ್ಯ & ಕೈಗಾರಿಕಾ ಕ್ಷೇತ್ರ (76,296 ಕೋಟಿ) ಹೆಚ್ಚಿನ ಅನುದಾನ ಪಡೆದಿರುವ ಇತರ ಕ್ಷೇತ್ರಗಳಾಗಿವೆ. ಸಮಾಜ ಕಲ್ಯಾಣ ಕ್ಷೇತ್ರ (62,362 ಕೋಟಿ), ವೈಜ್ಞಾನಿಕ ಇಲಾಖೆ (55,756 ಕೋಟಿ) ಹಾಗೂ ತೆರಿಗೆ ಆಡಳಿತ (45,500 ಕೋಟಿ), ವಿದೇಶಾಂಗ ವ್ಯವಹಾರ (22,119 ಕೋಟಿ) ಹಣಕಾಸು ಕ್ಷೇತ್ರ (20,649 ಕೋಟಿ) 10 ಸಾವಿರ ಕೋಟಿಗಿಂತ ಅಧಿಕ ಅನುದಾನ ಪಡೆಯುವ ವಿಭಾಗದಲ್ಲಿ ಸೇರಿವೆ. ಈಶಾನ್ಯ ಅಭಿವೃದ್ಧಿಗೆ 6,812 ಕೋಟಿ ಹಂಚಿಕೆಯಾಗಲಿದೆ.







