2027ರ ಜನಗಣತಿಗೆ 11,718 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಸಂಪುಟ ಅಸ್ತು

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ | Photo Credit : PTI
ಹೊಸದಿಲ್ಲಿ,ಡಿ.12: 2027ನೇ ಸಾಲಿನ ಜನಗಣತಿ ಕಾರ್ಯಕ್ಕೆ ಕೇಂದ್ರ ಸಂಪುಟವು ಶುಕ್ರವಾರ 11,718 ಕೋಟಿ ರೂ.ಗಳ ಬಜೆಟ್ ಅನುದಾನ ಬಿಡುಗಡೆಗೆ ತನ್ನ ಅನುಮೋದನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
2027ರ ಸಾಲಿನ ಜನಗಣತಿಯು ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಹಾಗೂ ಅಂಕಿಅಂಶ ಸಂಗ್ರಹ ಪ್ರಕ್ರಿಯೆ ಎಂದು ವೈಷ್ಣವ್ ತಿಳಿಸಿದರು. ಇದು ದೇಶದಲ್ಲಿ ನಡೆಯುವ 16ನೇ ಹಾಗೂ ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿದೆ ಎಂದರು.
10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. ಕೋವಿಡ್ ಕಾರಣಕ್ಕೆ ಈ ಬಾರಿ ವಿಳಂಬವಾಗಿತ್ತು. ಈ ಬಾರಿ ನಡೆಯುವ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡುವ ಹಾಗೂ ಮನೆಗಳನ್ನು ಗಣತಿ ಮಾಡುವ ಕಾರ್ಯವನ್ನು 2026ರ ಏಪ್ರಿಲ್ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ನಡೆಸಲಾಗುವುದು. ಎರಡನೇ ಹಂತದಲ್ಲಿ ನಡೆಸಲಾಗುವ ಜನಸಂಖ್ಯಾ ಗಣತಿಯು 2027ರ ಫೆಬ್ರವರಿಯಲ್ಲಿ ನಡೆಯಲಿದೆ.
ಆದಾಗ್ಯೂ ಲಡಾಕ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಭಾಗಗಳು ಸೇರಿದಂತೆ ಹಿಮಚ್ಛಾದಿತ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಜನಗಣತಿಯನ್ನು ಮುಂಚಿತವಾಗಿ ಅಂದರೆ 2026ರ ಸೆಪ್ಟೆಂಬರ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
2027ರ ಜನಗಣತಿಯು ಭಾರತದಲ್ಲಿ ಕೈಗೊಳ್ಳಲಾಗುವ ಮೊತ್ತ ಮೊದಲ ಡಿಜಿಟಲ್ ಜನಗಣತಿಯಾಗಲಿದೆ. ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲ್ಯಾಟ್ಫಾರಂಗಳಿಗೆ ಹೊಂದಿಕೊಳ್ಳುವ ಮೊಬೈಲ್ ಆ್ಯಪ್ಲಿಕೇಶನ್ಗಳನ್ನು ಬಳಸಿಕೊಂಡು ದತ್ತಾಂಶಗಳನ್ನು ಸಂಗ್ರಹಿಸಲಾಗುವುದು. ಇಡೀ ಪ್ರಕ್ರಿಯೆಯ ನಿರ್ವಹಣೆ ಹಾಗೂ ನಿಗಾವಣೆಗೆ (ಸಿಎಂಎಂಎಸ್) ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ವೈಷ್ಣವ್ ತಿಳಿಸಿದರು.







