ಖಾಸಗಿ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಉದ್ಯೋಗ ಮೀಸಲಾತಿ ಜಾರಿಗೊಳಿಸಬೇಕು: ಕೇಂದ್ರ ಸಚಿವ ದಾಮದಾಸ್ ಅಠವಳೆ ಸಲಹೆ

ದಾಮದಾಸ್ ಅಠವಳೆ | PTI
ರಾಯ್ಪುರ: ಹಲವು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿರುವುದರಿಂದ, ಖಾಸಗಿ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ರಾಜ್ಯ ಸಚಿವ ದಾಮದಾಸ್ ಅಠವಳೆ ಸಲಹೆ ನೀಡಿದ್ದಾರೆ.
ಮಂಗಳವಾರ ರಾಯ್ಪುರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆರ್ಪಿಐ (ಅಠವಳೆ ಬಣ) ಮುಖ್ಯಸ್ಥರೂ ಅದ ರಾಮದಾಸ್ ಅಠವಳೆ, ಮುಂಬರುವ ಜನಗಣತಿಯ ವೇಳೆ ಜಾತಿ ಗಣತಿಯನ್ನೂ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರ್ಧರಿಸಿರುವುದು ಐತಿಹಾಸಿಕ ನಡೆಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ತುಳಿತಕ್ಕೊಳಗಾದವರು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯ ಕುರಿತು ಕೇಳಲಾದ ಪ್ರಶ್ನೆಗೆ, "ನಾನು ದೀರ್ಘಕಾಲದಿಂದ ಇಂತಹ ಕ್ರಮದ ಜಾರಿಗಾಗಿ ಆಗ್ರಹಿಸುತ್ತಿದ್ದೇನೆ" ಎಂದು ಅವರು ಉತ್ತರಿಸಿದ್ದಾರೆ.
"ಈ ಬೇಡಿಕೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದು, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಹಾರದ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್, ಈ ಹಿಂದೆ ಬಿಜೆಪಿಯಲ್ಲಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಹಾಗೂ ನಾನು ಆಗ್ರಹಿಸುತ್ತಲೇ ಬಂದಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಸದ್ಯ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಛತ್ತೀಸ್ಗಢದ ಬಾಲ್ಕೊ ಸಂಸ್ಥೆಯನ್ನೂ ಖಾಸಗೀಕರಣಗೊಳಿಸಲಾಗಿದೆ. ಆದರೆ, ಖಾಸಗಿ ವಲಯದಲ್ಲಿ ಯಾವುದೇ ಮೀಸಲಾತಿ ಇಲ್ಲ" ಎಂದು ಅವರು ಹೇಳಿದ್ದಾರೆ.
ನಾವು ಸರಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುತ್ತಿದ್ದೇವೆ. ನಾನು ಸರಕಾರದಲ್ಲಿದ್ದರೂ, ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂಬುದು ನನ್ನ ಮನಸ್ಸಿನ ಬಯಕೆಯಾಗಿದೆ" ಎಂದು ಅವರು ಬಹಿರಂಗಗೊಳಿಸಿದ್ದಾರೆ.
ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ರಾಮದಾಸ್ ಅಠವಳೆ ನೇತೃತ್ವದ ಆರ್ಪಿಐ (ಅಠವಳೆ ಬಣ) ಕೂಡಾ ಭಾಗಿಯಾಗಿದ್ದು, ರಾಮದಾಸ್ ಅಠವಳೆ ಸಾಮಾಜಿಕ ನ್ಯಾಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂಬ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.







