ಜನರನ್ನು ಚೆನ್ನಾಗಿ ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ | PC : PTI
ನಾಗ್ಪುರ,ಆ.31: ತನ್ನ ನೇರವಾದ ಮತ್ತು ಆಗಾಗ್ಗೆ ಅಸಾಂಪ್ರದಾಯಿಕ ಹೇಳಿಕೆಗಳಿಗಾಗಿ ಹೆಸರಾಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಅಖಿಲ ಭಾರತೀಯ ಮಹಾನುಭಾವ ಪರಿಷದ್ನಲ್ಲಿ ಮಾಡಿದ ಭಾಷಣದ ಮೂಲಕ ಮತ್ತೆ ರಾಜಕೀಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ.
ರಾಜಕೀಯದ ವಾಸ್ತವಗಳನ್ನು ಪ್ರತಿಬಿಂಬಿಸುವಾಗ ಗಡ್ಕರಿ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ಮರುಳು ಮಾಡುವವರನ್ನು ಆಗಾಗ್ಗೆ ಅತ್ಯುತ್ತಮ ನಾಯಕರೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಅವರ ಈ ಹೇಳಿಕೆಯು ತನ್ನ ನಿಷ್ಠುರತೆಯಿಂದಾಗಿ ಗಮನವನ್ನು ಸೆಳೆದಿದೆ.
ತನ್ನ ಭಾಷಣದಲ್ಲಿ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಸವಾಲುಗಳತ್ತ ಗಮನ ಸೆಳೆದ ಗಡ್ಕರಿ, ‘ಮಾತನಾಡುವುದು ಸುಲಭ, ಆದರೆ ಮಾಡುವುದು ಕಷ್ಟ. ನಾನು ಅಧಿಕಾರಿಯಲ್ಲ, ಆದರೆ ನಾನಿದನ್ನು ಅನುಭವಿಸಿದ್ದೇನೆ. ರಾಜಕಾರಣದಲ್ಲಿ ಹೃದಯಾಂತರಾಳದಿಂದ ಬಹಿರಂಗವಾಗಿ ಸತ್ಯ ನುಡಿಯುವವರನ್ನು ಹೆಚ್ಚಾಗಿ ನಿರುತ್ತೇಜಿಸಲಾಗುತ್ತದೆ’ ಎಂದರು.
ಮರಾಠಿಯ ‘ಹೌಸೆ,ನವಸೆ ಆಣಿ ಗವಸೆ’ ಎಂಬ ಜನಪ್ರಿಯ ಮರಾಠಿ ನುಡಿಗಟ್ಟನ್ನು ಗಡ್ಕರಿ ಉಲ್ಲೇಖಿಸಿದರು. ನಾಯಕರು ತಾವು ಸೃಷ್ಟಿಸಬಹುದಾದ ದೃಷ್ಟಿಕೋನವನ್ನು ನಂಬಿಕೊಂಡಿರುತ್ತಾರೆ ಮತ್ತು ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯೋರ್ವ ಜನಸಾಮಾನ್ಯರನ್ನು ಎಷ್ಟು ಚೆನ್ನಾಗಿ ದಾರಿ ತಪ್ಪಿಸಬಹುದು ಅಥವಾ ಜನರನ್ನು ಮೋಸಗೊಳಿಸಬಹುದು ಎನ್ನುವುದು ನಾಯಕತ್ವವನ್ನು ವ್ಯಾಖ್ಯಾನಿಸುತ್ತದೆ ಎನ್ನುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ.







