"ಆದಾಯ ನಿಂತುಹೋಗಿದೆ": ಕೇಂದ್ರ ಸಚಿವ ಸ್ಥಾನ ತೊರೆದು ನಟನೆಯಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ ಸುರೇಶ್ ಗೋಪಿ

ಸುರೇಶ್ ಗೋಪಿ (Photo: PTI)
ಕಣ್ಣೂರು : ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಸಚಿವ ಸ್ಥಾನವನ್ನು ತೊರೆದು ಸಿನಿಮಾ ವೃತ್ತಿಜೀವನವನ್ನು ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಕಣ್ಣೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ, ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ, ಸಚಿವ ಸ್ಥಾನವನ್ನು ವಹಿಸಿಕೊಂಡ ನಂತರ ಆದಾಯದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಆದಾಯ ಗಳಿಸಬೇಕಾಗಿದೆ. ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಹೇಳಿದರು.
ನಾನು ಪಕ್ಷದಲ್ಲಿ ಅತ್ಯಂತ ಕಿರಿಯವನು. ನನ್ನ ಸ್ಥಾನಕ್ಕೆ ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸಿ.ಸದಾನಂದನ್ ಮಾಸ್ಟರ್ ಅವರನ್ನು ನೇಮಕ ಮಾಡಬೇಕು ಎಂದು ಸುರೇಶ್ ಗೋಪಿ ಹೇಳಿದ್ದಾರೆ.
"ನಾನು ಅಕ್ಟೋಬರ್ 2008ರಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡೆ. ಕೇರಳದಲ್ಲಿ ಜನರಿಂದ ಆಯ್ಕೆಯಾದ ಬಿಜೆಪಿ ಪಕ್ಷದ ಮೊದಲ ಸಂಸದ ನಾನು. ಆದ್ದರಿಂದ ಪಕ್ಷವು ನನ್ನನ್ನು ಸಚಿವನನ್ನಾಗಿ ಮಾಡಿತು. ನಾನು ಸಚಿವನಾಗಬೇಕೆಂದು ಎಂದಿಗೂ ಪ್ರಾರ್ಥಿಸಿಲ್ಲ. ಚುನಾವಣೆಗೆ ಒಂದು ದಿನ ಮೊದಲು ನಾನು ಸಚಿವನಾಗಲು ಬಯಸುವುದಿಲ್ಲ, ನಾನು ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.







