ಮೆಟ್ರಿಕ್ಪೂರ್ವ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಯೋಜನೆ ರದ್ದತಿಯನ್ನು ಸಮರ್ಥಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Photo : ಸ್ಮೃತಿ ಇರಾನಿ | PTI
ಚೆನ್ನೈ: 1ರಿಂದ 8ನೇ ತರಗತಿವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿರುವ ಮೆಟ್ರಿಕ್ಪೂರ್ವ ವಿದ್ಯಾರ್ಥಿವೇತನ ಯೋಜನೆಯನ್ನು ಹಿಂತೆಗೆದುಕೊಂಡಿರುವ ಕೇಂದ್ರ ಸರಕಾರದ ನಿರ್ಧಾರವು ಯೋಗ್ಯ ಹಾಗೂ ದೃಢವಾದ ಕಾರಣಗಳನ್ನು ಆಧರಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಝುಬಿನ್ ಇರಾನಿ ಗುರುವಾರ ರಾಜ್ಯಸಭೆಗೆ ತಿಳಿಸಿದರು.
1ರಿಂದ 8ನೇ ತರಗತಿಯವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೆಟ್ರಿಕ್ಪೂರ್ವ ವಿದ್ಯಾರ್ಥಿವೇತನ ಯೋಜನೆಯನ್ನು ಪುನಾರಂಭಿಸಬೇಕಂದು ಕೋರಿ ಕಳೆದ ವರ್ಷ ತಮಿಳುನಾಡು ಸರಕಾರವು ಮಾಡಿದ್ದ ಮನವಿಗೆ ಕೇಂದ್ರ ಸರಕಾರದ ಉತ್ತರವನ್ನು ತಿಳಿಯಬಯಸಿದ ಡಿಎಂಪಿ ಸಂಸದ ಪಿ.ವಿಲ್ಸನ್ ಅವರ ಪ್ರಶ್ನೆಗೆ ಇರಾನಿ ಹೀಗೆ ಉತ್ತರಿಸಿದರು. 1ರಿಂದ 8ನೇ ತರಗತಿಯವರೆಗಿನ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನಯೋಜನೆಯನ್ನು ಹಿಂತೆಗೆದುಕೊಂಡಿರುವುದರಿಂದ ತಮಿಳುನಾಡಿನ 5 ಲಕ್ಷ ಬಡ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿವೇತನ ಯೋಜನೆಯನ್ನು ಮರುಜಾರಿಗೊಳಿಸಬೇಕೆಂದು ತಮಿಳುನಾಡು ಸರಕಾರ ಕಳೆದ ವರ್ಷ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ಈ ಬಗ್ಗೆ ಸಂಸದ ವಿಲ್ಸನ್ ಅವರಿಗೆ ರಾಜ್ಯಸಭೆಯಲ್ಲಿ ವಿವರಣೆ ನೀಡಿದ ಸಚಿವೆ ಸ್ಮೃತಿ ಇರಾನಿ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಟ್ಟದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ರಾಷ್ಟ್ರೀಯ ಸರಾಸರಿಗೆ ಸರಿಸಮಾನವಾಗಿದೆ. ಅಲ್ಲದೆ 1ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಈಗಾಗಲೇ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ (ಆರ್ಟಿಇ) -2009ರ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಆರ್ಟಿಇ ಕಾಯ್ದೆಯು ಪ್ರಾಥಮಿಕ ಶಿಕ್ಷಣ (1ರಿಂದ 8)ವನ್ನು ಉಚಿತ ಹಾಗೂ ಕಡ್ಡಾಯವಾಗಿ ಒದಗಿಸುವುದಕ್ಕೆ ಸರಕಾರಗಳನ್ನು ಬಾಧ್ಯಸ್ಥರನ್ನಾಗಿಸುತ್ತದೆ. ಇದರಿಂದಾಗಿ ಯಾವುದೇ ಮಗುವು ಶಿಕ್ಷಣಕ್ಕಾಗಿ ಶುಲ್ಕ ಮತ್ತಿತರ ವೆಚ್ಚಗಳನ್ನು ಪಾವತಿಸಬೇಕಾಗಿರುವುದಿಲ್ಲವೆಂದು ಸಚಿವೆ ತಿಳಿಸಿದರು.
ಈ ಎಲ್ಲಾ ಕಾರಣಗಳಿಂದಾಗಿ ಕೇಂದ್ರ ಸರಕಾರವು 1ರಿಂದ 8ನೇ ತರಗತಿಯವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿನ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನ ಯೋಜನೆಯನ್ನು ಮುಂದುವರಿಸದಿರಲು ನಿರ್ಧರಿಸಿದೆಯೆಂದು ಸ್ಮೃತಿ ಇರಾನಿ ಉತ್ತರಿಸಿದರು.







