ಚಿರತೆ ಹಲ್ಲಿನ ವಿವಾದ | ಕೇಂದ್ರ ಸಚಿವ ಸುರೇಶ ಗೋಪಿ ವಿರುದ್ಧ ತನಿಖೆ

ಸುರೇಶ್ ಗೋಪಿ | PC : PTI
ತಿರುವನಂತಪುರ: ಕೇಂದ್ರ ಸಚಿವ ಹಾಗೂ ಕೇರಳದ ಬಿಜೆಪಿ ಸಂಸದ ಅವರ ಬಳಿ ಚಿರತೆ ಹಲ್ಲು ಇದೆ ಎಂಬ ಆರೋಪ ಕುರಿತಂತೆ ಅರಣ್ಯ ಇಲಾಖೆಯು ತನಿಖೆಯನ್ನು ಆರಂಭಿಸಿದೆ.
ಚಿರತೆ ಹಲ್ಲನ್ನು ಹೊಂದಿದ್ದಕ್ಕಾಗಿ ಮಲಯಾಳಂ ರ್ಯಾಪರ್, ‘ವೇಡನ್’ ಎಂದೇ ಜನಪ್ರಿಯರಾಗಿರುವ ಹಿರನ್ ದಾಸ್ ಮುರಳಿ ವಿರುದ್ಧ ಅರಣ್ಯ ಇಲಾಖೆಯು ಕಳೆದ ಎಪ್ರಿಲ್ ನಲ್ಲಿ ಪ್ರಕರಣ ದಾಖಲಿಸಿದ ಬಳಿಕ ಚಿರತೆ ಹಲ್ಲು ಅಳವಡಿಸಿದ ಸರವನ್ನು ಧರಿಸಿದ್ದ ಗೋಪಿ ಅವರ ಚಿತ್ರವು ವಿವಾದಕ್ಕೆ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರೋರ್ವರು ಗೋಪಿ ವಿರುದ್ಧವೂ ಕ್ರಮವನ್ನು ಕೋರಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ವಿಚಾರಣೆಯನ್ನು ಆರಂಭಿಸಿರುವ ಅರಣ್ಯ ಇಲಾಖೆಯು ವಿವರವಾದ ಹೇಳಿಕೆಗಳನ್ನು ನೀಡುವಂತೆ ಮತ್ತು ಆರೋಪಕ್ಕೆ ಪುರಾವೆಯನ್ನು ಒದಗಿಸುವಂತೆ ದೂರುದಾರರಿಗೆ ಸೂಚಿಸಿದೆ. ಗೋಪಿ ಹೇಳಿಕೆಯನ್ನೂ ಶೀಘ್ರವೇ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ಚಿರತೆಯನ್ನು ವನ್ಯಜೀವಿ(ರಕ್ಷಣೆ) ಕಾಯ್ದೆಯ ಅನುಸೂಚಿ 1ರಡಿ ಪಟ್ಟಿ ಮಾಡಲಾಗಿದ್ದು, ಅದರ ಹಲ್ಲನ್ನು ಹೊಂದಿರುವುದು ಅಪರಾಧವಾಗಿದೆ.





