ಮತಪಟ್ಟಿ ಅಕ್ರಮ ಆರೋಪದ ಕುರಿತು ನಾನು ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ: ಕೇಂದ್ರ ಸಚಿವ ಸುರೇಶ್ ಗೋಪಿ

ಕೇಂದ್ರ ಸಚಿವ ಸುರೇಶ್ ಗೋಪಿ (PTI)
ತ್ರಿಶೂರ್: ಕಾಂಗ್ರೆಸ್ ಹಾಗೂ ಎಡಪಕ್ಷಗಳು ಎತ್ತಿರುವ ಮತಪಟ್ಟಿ ಅಕ್ರಮ ಆರೋಪದ ಕುರಿತು ನಾನು ಉತ್ತರ ನೀಡಬೇಕಾದ ಅಗತ್ಯವಿಲ್ಲ ಹಾಗೂ ಈ ಕುರಿತು ಚುನಾವಣಾ ಆಯೋಗ ಉತ್ತರ ನೀಡಲಿದೆ ಎಂದು ರವಿವಾರ ಕೇಂದ್ರ ಸಚಿವ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ.
ನಾನು ಓರ್ವ ಸಚಿವನಾಗಿ ನನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಗೋಪಿ, ತಮ್ಮ ವಿರುದ್ಧ ಮತಪಟ್ಟಿ ಅಕ್ರಮ ಆರೋಪ ಮಾಡಿರುವವರು ಮಂಗಗಳು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
“ಮತಪಟ್ಟಿ ಅಕ್ರಮ ಆರೋಪಗಳ ಕುರಿತು ಚುನಾವಣಾ ಆಯೋಗ ಉತ್ತರ ನೀಡಲಿದೆ. ಇದಕ್ಕೆ ಉತ್ತರ ನೀಡಬೇಕಿರುವುದು ಚುನಾವಣಾ ಆಯೋಗ. ನಾನು ಸಚಿವನಾಗಿದ್ದು, ನಾನು ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ಇಲ್ಲವಾದರೆ, ಅವರು ಈ ವಿಷಯವನ್ನು ಸುಪ್ರೀಂ ಕೋರ್ಟ್ ಗೆ ಕೊಂಡೊಯ್ದಾಗ, ಅಲ್ಲಿ ಅವರಿಗೆ ಉತ್ತರ ದೊರೆಯಲಿದೆ” ಎಂದು ಅವರು ಸ್ಪಷ್ಟನೆ ನೀಡಿದರು.
ಈ ಆರೋಪಗಳನ್ನು ಮಾಡುತ್ತಿರುವ ಮಂಗಗಳೂ ಉತ್ತರ ಪಡೆಯಲು ಅಲ್ಲಿಗೆ ಹೋಗಬಹುದು ಎಂದೂ ಅವರು ವ್ಯಂಗ್ಯವಾಗಿ ಹೇಳಿದರು.
ಕಳೆದ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಅಕ್ರಮವೆಸಗಲಾಗಿದೆ ಎಂದು ತಮ್ಮ ಹಾಗೂ ಬಿಜೆಪಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಕುರಿತು ಸುರೇಶ್ ಗೋಪಿ ಇದೇ ಪ್ರಥಮ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.







