ಶೀಘ್ರವೇ ಭಾರತದ ಪ್ರತಿಯೊಂದೂ ಮನೆಗೆ ಡಿಜಿಟಲ್ ವಿಳಾಸ!

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಪಿನ್ ಕೋಡ್ ವ್ಯವಸ್ಥೆಯನ್ನು ಅಳವಡಿಸಿಕೊಂಡ 53 ವರ್ಷಗಳ ಬಳಿಕ ಅಂಚೆ ಇಲಾಖೆಯು ಕಡಿಮೆ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸೇವೆಗಳ ಉತ್ತಮ ನಾಗರಿಕ-ಕೇಂದ್ರಿತ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದೊಂದಿಗೆ ವಿನೂತನ ಡಿಜಿಟಲ್ ಉಪಕ್ರಮವೊಂದನ್ನು ಆರಂಭಿಸಿದೆ ಎಂದು newindianexpress.com ವರದಿ ಮಾಡಿದೆ.
ಅಂಚೆ ಇಲಾಖೆಯು ಇತ್ತೀಚಿಗೆ ಭೌಗೋಳಿಕ ದತ್ತಾಂಶವನ್ನು ಆಧರಿಸಿದ ಡಿಜಿಟಲ್ ವಿಳಾಸ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದು ಪ್ರತಿ ಮನೆ ಅಥವಾ ಕಚೇರಿಗೆ ವಿಶಿಷ್ಟವಾಗಿರುತ್ತದೆ. ಅಸ್ತಿತ್ವದಲ್ಲಿರುವ ಪಿನ್ ಕೋಡ್ ವ್ಯವಸ್ಥೆಯು ಪ್ರದೇಶ ನಿರ್ದಿಷ್ಟವಾಗಿದೆ.
ರಾಷ್ಟ್ರೀಯ ವಿಳಾಸ ಜಾಲ ಅಥವಾ ಡಿಜಿಟಲ್ ಪೋಸ್ಟಲ್ ಇಂಡೆಕ್ಸ್ ನಂಬರ್(ಡಿಜಿಪಿನ್) ಸೇವಾ ವಿತರಣೆಯನ್ನು ತ್ವರಿತಗೊಳಿಸುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಡಿಜಿಪಿನ್ ವ್ಯವಸ್ಥೆಯನ್ನು ಇಸ್ರೋ,ಐಐಟಿ-ಹೈದರಾಬಾದ್ ಮತ್ತು ರಾಷ್ಟ್ರೀಯ ದೂರಸಂವೇದಿ ಕೇಂದ್ರ(ಎನ್ಆರ್ಎಸ್ಸಿ)ದ ಸಹಯೋಗದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.
‘ಡಿಜಿಪಿನ್ 12 ಅಂಕಿಗಳ ಆಲ್ಫಾನ್ಯೂಮರಿಕ್(ಅಕ್ಷರಸಂಖ್ಯಾಯುಕ್ತ) ಕೋಡ್ ಆಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾಗಿರುತ್ತದೆ. ಇದು ಓಪನ್-ಸೋರ್ಸ್,ಜಿಯೊ-ಕೋಡೆಡ್,ಗ್ರಿಡ್-ಆಧಾರಿತ ಡಿಜಿಟಲ್ ವಿಳಾಸ ವ್ಯವಸ್ಥೆಯಾಗಿದೆ. ನಾವು ಆರಂಭಿಕ ಹಂತಗಳಲ್ಲಿದ್ದೇವೆ. ಇದು ಮುಂದುವರಿದಂತೆ ಮತ್ತು ಭವಿಷ್ಯದಲ್ಲಿ ಜನಪ್ರಿಯವಾಗುತ್ತಿದ್ದಂತೆ ವ್ಯಕ್ತಿ ಕೇವಲ ತನ್ನ ಹೆಸರು ಮತ್ತು ಮನೆಸಂಖ್ಯೆಯನ್ನು ಡಿಜಿಪಿನ್ನೊಂದಿಗೆ ಒದಗಿಸಿದರೆ ಸಾಕು,ಎಲ್ಲವನ್ನೂ ಸರಾಗವಾಗಿ ತಲುಪಿಸಬಹುದು’ ಎಂದು ಅಧಿಕಾರಿ ತಿಳಿಸಿದರು.
ಹೊಸ ವಿಳಾಸ ವ್ಯವಸ್ಥೆಯು ಒಂದು ನಿರ್ದಿಷ್ಟ ಸ್ಥಳದ ಡಿಜಿಪಿನ್ ಪಡೆಯಲು ಅಕ್ಷಾಂಶ ಮತ್ತು ರೇಖಾಂಶ ನಿರ್ದೇಶಾಂಕಗಳನ್ನು ಬಳಸುತ್ತದೆ ಮತ್ತು ಲೊಕೇಷನ್ ಮ್ಯಾಪಿಂಗ್ನ್ನು ಸರಳಗೊಳಿಸುತ್ತದೆ ಎಂದರು.
ಅಂಚೆ ಇಲಾಖೆಯು 1972ರಲ್ಲಿ ಪಿನ್ ಕೋಡ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು,ಇದು ಭಾರತೀಯ ಅಂಚೆ ಸೇವೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಿನ ವಿನೂತನ ಡಿಜಿಟಲ್ ಉಪಕ್ರಮವು ವಿಳಾಸ ವ್ಯವಸ್ಥೆಯ ಆಧುನೀಕರಣವನ್ನು ಸೂಚಿಸುತ್ತದೆ.
ನೂತನ ವ್ಯವಸ್ಥೆಯು ಜನರು ಡೋರ್ ನಂಬರ್ಗಳನ್ನೂ ಹೊಂದಿರದ ಮತ್ತು ಹೆಚ್ಚಾಗಿ ತಮ್ಮ ಮನೆಗಳನ್ನು ಉಲ್ಲೇಖಿಸಲು ಕೆಲವು ಲ್ಯಾಂಡ್ಮಾರ್ಕ್ಗಳನ್ನು ಬಳಸುವ ದೂರದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಪ್ರಯೋಜನಕಾರಿಯಾಗಲಿದೆ ಮತ್ತು ವಿತರಣೆಯನ್ನು ಖಚಿತಪಡಿಸಲಿದೆ. ಮನೆಗಳು ಪರಸ್ಪರ ದೂರದಲ್ಲಿರುವುದರಿಂದ ನಿಖರವಾದ ಸ್ಥಳವನ್ನು ಗುರುತಿಸುವುದು ಅತ್ಯಂತ ಕಷ್ಟಕರವಾಗಿರುವ ಗುಡ್ಡಗಾಡು ಪ್ರದೇಶಗಳಲ್ಲಿ ನೂತನ ವ್ಯವಸ್ಥೆಯು ನಿರ್ಣಾಯಕ ಮಹತ್ವದ್ದಾಗಲಿದೆ ಎಂದೂ ಅಧಿಕಾರಿ ತಿಳಿಸಿದರು.
ಡಿಜಿಪಿನ್ ಆಧಾರಿತ ಜಿಯೊ-ಲೊಕೇಷನಿಂಗ್ ಜಾರಿಗೊಂಡರೆ ಪ್ರಮುಖ ಸರಕಾರಿ ಉಪಕ್ರಮಗಳು ಮತ್ತು ಪ್ರಯೋಜನಗಳನ್ನು ಯಾವುದೇ ತೊಂದರೆಯಿಲ್ಲದೆ ಜನರಿಗೆ ತಲುಪಿಸಬಹುದು. ‘ನಿಮ್ಮ ಡಿಜಿಪಿನ್ ತಿಳಿದುಕೊಳ್ಳಿ(ನೋ ಯುವರ್ ಡಿಜಿಪಿನ್)’ ಪೋರ್ಟಲ್ ಮೂಲಕ ವ್ಯಕ್ತಿಯು ತನ್ನ ನಿರ್ದಿಷ್ಟ ಸಂಖ್ಯೆಯನ್ನು ತಕ್ಷಣವೇ ಪಡೆದುಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದರು.







