ಗುಜರಾತ್ | 4 ಸಾವಿರ ಕೋಟಿ ದೇಣಿಗೆ ಸಂಗ್ರಹಿಸಿದ ಹೆಸರಿಗೂ ಇಲ್ಲದ ಪಕ್ಷಗಳು!

ಸಾಂದರ್ಭಿಕ ಚಿತ್ರ | PC : PTI
ಅಹಮದಾಬಾದ್: ಗುಜರಾತ್ ನಲ್ಲಿ ಹೆಸರಿಗೂ ಇಲ್ಲದ ಹಲವು ಪಕ್ಷಗಳು 4 ಸಾವಿರ ಕೋಟಿಗೂ ಅಧಿಕ ಹಣವನ್ನು ದೇಣಿಗೆಯಾಗಿ ವಸೂಲಿ ಮಾಡಿರುವ ಕಥೆಯೊಂದು ಬಯಲಾಗಿದೆ.
ಈ ಅಷ್ಟೂ ಪಕ್ಷಗಳು ಒಟ್ಟಾರೆ 43 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದವು ಮತ್ತು ಪಡೆದ ಮತಗಳು ಕೇವಲ 54,069.
ಆದರೂ, ಅವು 4,300 ಕೋಟಿ ರೂ ದೇಣಿಗೆ ಸಂಗ್ರಹಿಸಿದವು.
ಜನರು ಆ ಪಕ್ಷಗಳ ಹೆಸರನ್ನೇ ಯಾವತ್ತೂ ಕೇಳಿರಲಿಕ್ಕಿಲ್ಲ. ಆದರೆ ಅವು ಮಾತ್ರ ಚುನಾವಣೆ ಹೆಸರಲ್ಲಿ ಸಾವಿರಾರು ಕೋಟಿ ದೇಣಿಗೆ ಪಡೆಯುತ್ತಿವೆ.
ದೈನಿಕ್ ಭಾಸ್ಕರ್ ವರದಿ ಪ್ರಕಾರ, ಈ 10 ಅನಾಮಿಕ ರಾಜಕೀಯ ಪಕ್ಷಗಳು ಚುನಾವಣಾ ವರದಿಯಲ್ಲಿ ತಮ್ಮ ವೆಚ್ಚ ಕೇವಲ 39 ಲಕ್ಷ ಎಂದು ತೋರಿಸಿವೆ.
ಆದರೆ ಆಡಿಟ್ ವರದಿಯಲ್ಲಿ ಅವುಗಳ ವೆಚ್ಚ 3,500 ಕೋಟಿ ಎಂದಿದೆ.
ಆ 10 ಪಕ್ಷಗಳು ಯಾವುವು?ಅವುಗಳು ಮಾಡಿದ ಲೂಟಿಯ ವಿವರವನ್ನೊಮ್ಮೆ ನೊಡೋಣ.
ಲೋಕ್ಶಾಹಿ ಸತ್ತಾ ಪಕ್ಷವು ಪಡೆದ ದೆಣಿಗೆ 1045 ಕೋಟಿ. ತೋರಿಸಿರುವ ಖರ್ಚು 1031 ಕೋಟಿ. ನಿಜವಾಗಿಯೂ ಮಾಡಿರುವ ಖರ್ಚು 2,27,000 ರೂ.
ಲೋಕಶಾಹಿ ಸತ್ತಾ ಪಕ್ಷವು ಕೊನೆಯದಾಗಿ 2017 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಅದರ ನಂತರ ಈ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಸತ್ಯವಾದಿ ರಕ್ಷಕ್ ಪಕ್ಷವು ಪಡೆದ ದೇಣಿಗೆ 416 ಕೋಟಿ. ತೋರಿಸಿರುವ ಖರ್ಚು 416 ಕೋಟಿ. ನಿಜವಾಗಿಯೂ ಮಾಡಿರುವ ವೆಚ್ಚ ಕೇವಲ 1.43 ಲಕ್ಷ.
ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ ಪಡೆದ ದೇಣಿಗೆ 608 ಕೋಟಿ. ತೋರಿಸಿರುವ ಖರ್ಚು 407 ಕೋಟಿ. ನಿಜವಾಗಿಯೂ ಮಾಡಿರುವ ಖರ್ಚು 1.61 ಲಕ್ಷ.
ಭಾರತೀಯ ನ್ಯಾಷನಲ್ ಜನತಾ ದಳವು ಪಡೆದ ದೇಣಿಗೆ 962 ಕೋಟಿ. ತೋರಿಸಿರುವ ಖರ್ಚು 961 ಕೋಟಿ. ನಿಜವಾದ ಖರ್ಚು 2.83 ಲಕ್ಷ.
ಸ್ವತಂತ್ರ ಅಭಿವ್ಯಕ್ತಿ ಪಾರ್ಟಿಯು ಪಡೆದ ದೇಣಿಗೆ 663 ಕೋಟಿ. ತೋರಿಸಿರುವ ಖರ್ಚು 73 ಕೋಟಿ. ನಿಜವಾದ ಖರ್ಚು 12.18 ಲಕ್ಷ.
ಭಾರತೀಯ ಜನ ಪರಿಷತ್ ಪಡೆದ ದೇಣಿಗೆ 249 ಕೋಟಿ. ತೋರಿಸಿರುವ ಖರ್ಚು 247 ಕೋಟಿ. ನಿಜವಾದ ಖರ್ಚು 14.5 ಲಕ್ಷ.
ಸೌರಾಷ್ಟ್ರ ಜನತಾ ಪಕ್ಷವು ಪಡೆದ ದೇಣಿಗೆ 200 ಕೋಟಿಹ ತೋರಿಸಿರುವ ಖರ್ಚು 199 ಕೋಟಿ. ನಿಜವಾದ ಖರ್ಚು 1.47 ಲಕ್ಷ.
ಜನ ಮನ ಪಕ್ಷವು ಪಡೆದ ದೇಣಿಗೆ 133 ಕೋಟಿ. ತೋರಿಸಿರುವ ಖರ್ಚು 133 ಕೋಟಿ. ನಿಜವಾದ ಖರ್ಚು 1.31 ಲಕ್ಷ.
ಮಾನವಾಧಿಕಾರ ನ್ಯಾಷನಲ್ ಪಾರ್ಟಿಯು ಪಡೆದ ದೇಣಿಗೆ 120 ಕೋಟಿ. ಖರ್ಚಿನ ಆಡಿಟ್ ವಿವರ ಅಲಭ್ಯ. ನಿಜವಾದ ಖರ್ಚು ಬರೀ 82 ಸಾವಿರ ರೂ.
ಗರೀಬ್ ಕಲ್ಯಾಣ ಪಾರ್ಟಿಯು ಪಡೆದ ದೇಣಿಗೆ 138 ಕೋಟಿ. ಖರ್ಚಿನ ಆಡಿಟ್ ವಿವರ ಅಲಭ್ಯ. ನಿಜವಾದ ಖರ್ಚು 3.27 ಲಕ್ಷ.
ದೊಡ್ಡ ಮೊತ್ತದ ದೇಣಿಗೆ ನೀಡುತ್ತಿದ್ದರೆ, ನೀವು ಪ್ಯಾನ್ ಕಾರ್ಡ್ ಸಂಖ್ಯೆ ನೀಡಬೇಕು ಎಂದು ನಿಯಮ ಹೇಳುತ್ತದೆ. ಆದರೆ ಸತ್ಯವಾದಿ ರಕ್ಷಕ ಪಕ್ಷ ಪ್ಯಾನ್ ಕಾರ್ಡ್ ಇಲ್ಲದೆ ನೂರಾರು ಕೋಟಿ ದೇಣಿಗೆ ಪಡೆದಿರುವುದನ್ನು ವರದಿ ಬಹಿರಂಗಪಡಿಸಿದೆ.
ದೇಣಿಗೆ ಪಡೆದ ವಿಷಯವಾಗಿ ಸರಿಯಾದ ವಿವರ ನೀಡುವುದಕ್ಕೆ ಈ ಪಕ್ಷಗಳ ಮುಖ್ಯಸ್ಥರೆನ್ನಿಸಿಕೊಂಡವರು ತಯಾರಿಲ್ಲ ಎಂಬುದನ್ನು ಕೂಡ ವರದಿ ಹೆಳಿದೆ.
ಗುಜರಾತ್ ನ ಮುಖ್ಯ ಚುನಾವಣಾ ಆಯುಕ್ತರ ವರದಿಯ ಪ್ರಕಾರ, ಈ ಎಲ್ಲಾ 10 ಪಕ್ಷಗಳು 23 ರಾಜ್ಯಗಳ ಜನರಿಂದ ದೇಣಿಗೆ ಪಡೆದಿವೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಪ್ರಕಾರ, ಈ ಎಲ್ಲಾ 10 ರಾಜಕೀಯ ಪಕ್ಷಗಳ ವಿರುದ್ಧ ಹಣ ವರ್ಗಾವಣೆ ಅಥವಾ ತೆರಿಗೆ ವಂಚನೆಯ ಆರೋಪಗಳಿವೆ.
ಚುನಾವಣೆಯಲ್ಲಿ ಬಹಳ ಕಡಿಮೆ ಮೊತ್ತದ ಹಣ ಖರ್ಚು ಮಾಡಲಾಗಿದೆ.ಆದರೆ ಆಡಿಟ್ ವರದಿಯಲ್ಲಿ ಅದನ್ನು ಸಿಕ್ಕಾಪಟ್ಟೆ ಜಾಸ್ತಿ ತೋರಿಸಲಾಗಿದೆ.
ಅಂದರೆ, ಹಣವನ್ನು ಬೇರೆಡೆಗೆ ವರ್ಗಾಯಿಸಿರುವುದು ಸ್ಪಷ್ಟ. ಈ ಅನುಮಾನದ ಆಧಾರದ ಮೇಲೆ, ಗುಜರಾತ್ನ ಮುಖ್ಯ ಚುನಾವಣಾಧಿಕಾರಿ ಈ ಪಕ್ಷಗಳ ವಿರುದ್ಧ ಆದಾಯ ತೆರಿಗೆ ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಈ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಂದರೆ, ಅವುಗಳ ನೋಂದಣಿ ರದ್ದುಗೊಳಿಸಲಾಗಿದೆ.
ಚುನಾವಣಾ ಬಾಂಡ್ಗಳ ಕುರಿತು ದೇಶದಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಅದರ ಪಾರದರ್ಶಕತೆ ಮತ್ತು ರಾಜಕೀಯ ಪಕ್ಷಗಳು ಪಡೆದ ದೇಣಿಗೆಗಳ ಬಗ್ಗೆ ಸಾಕಷ್ಟು ವಿವಾದವೆದ್ದಿತ್ತು. ಬಿಜೆಪಿ, ಕಾಂಗ್ರೆಸ್, ಎಸ್ಪಿ, ಟಿಎಂಸಿ, ಎನ್ಸಿಪಿಯಂತಹ ಪ್ರತಿಯೊಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದವು.
ಕೊನೆಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಅದನ್ನು ರದ್ದು ಪಡಿಸಿತು. ಚುನಾವಣಾ ಬಾಂಡ್ ಮೂಲಕ ನೀಡಲಾದ ಮೊತ್ತದ ವಿವರ ಬಹಿರಂಗ ಪಡಿಸುವಂತೆ ಆದೇಶಿಸಿತು. ಆಗ ಬಹಿರಂಗವಾದ ಮಾಹಿತಿಯಲ್ಲಿ ಒಟ್ಟು ಸಂಗ್ರಹವಾದ ಚುನಾವಣಾ ಬಾಂಡ್ ದೇಣಿಗೆಯಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತ ಬಿಜೆಪಿ ಒಂದೇ ಪಕ್ಷಕ್ಕೆ ಹೋಗಿರುವುದು ಕಂಡು ಬಂತು
ಹಾಗಿರುವಾಗಲೇ, ಗುಜರಾತ್ನ 10 ಅನಾಮಿಕ ಸಣ್ಣ ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ದೇಣಿಗೆ ಪಡೆದಿರುವ ವಿಷಯ ಆಘಾತಕಾರಿಯಾಗಿದೆ. ಗುಜರಾತ್ ನಲ್ಲಿ ನಕಲಿ ಪೊಲೀಸ್ ಸ್ಟೇಷನ್, ನಕಲಿ ನ್ಯಾಯಾಲಯ, ನಕಲಿ ಐಎಎಸ್ ಅಧಿಕಾರಿ, ನಕಲಿ ಟೋಲ್ ಪ್ಲಾಝಾ ಎಲ್ಲವೂ ಪತ್ತೆಯಾಗಿವೆ. ಈಗ ನಕಲಿ ರಾಜಕೀಯ ಪಕ್ಷಗಳ ಸರದಿ.







