ಉನ್ನಾಂವ್ ಅತ್ಯಾಚಾರ ಪ್ರಕರಣ | ಕುಲ್ದೀಪ್ ಸಿಂಗ್ ಸೆಂಗರ್ ಮೇಲ್ಮನವಿ: ಮತ್ತಷ್ಟು ಸಾಕ್ಷ್ಯ ಒದಗಿಸಲು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

ಕುಲ್ದೀಪ್ ಸಿಂಗ್ ಸೆಂಗರ್ | Photo Credit : PTI
ಹೊಸದಿಲ್ಲಿ: ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಅತ್ಯಾಚಾರ ಅಪರಾಧಿ ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ, ಮತ್ತಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಲು ಉನ್ನಾಂವ್ ಅತ್ಯಾಚಾರ ಸಂತ್ರಸ್ತೆ ಗುರುವಾರ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿಜೆಪಿಯ ಮಾಜಿ ನಾಯಕ ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಅರ್ಜಿಯೊಂದನ್ನು ಸಲ್ಲಿಸಿರುವ ಸಂತ್ರಸ್ತೆ, ಇತ್ತೀಚಿನ ಬೆಳವಣಿಗೆಗಳು ಹಾಗೂ ನನಗೆ ಮತ್ತು ನನ್ನ ಕುಟುಂಬಕ್ಕೆ ಇರುವ ಬೆದರಿಕೆಯನ್ನು ತೋರಿಸಲು ನ್ಯಾಯಾಲಯದ ಮುಂದೆ ವಾಸ್ತವಾಂಶಗಳು ಮತ್ತು ದಾಖಲೆಗಳನ್ನು ಮಂಡಿಸಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಜನ್ಮದಿನಾಂಕಕ್ಕೆ ಸಂಬಂಧಿಸಿ, ಉನ್ನಾಂವ್ ನಗರದಲ್ಲಿನ ನಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಇಬ್ಬರು ಅಧಿಕಾರಿಗಳ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸೆಂಗರ್ ತನಿಖೆಯ ಮೇಲೆ ಪ್ರಭಾವ ಬೀರಿದ್ದು, ಇದೀಗ ಮೇಲ್ಮನವಿಯೂ ಆಧರಿಸಿರುವ ನನ್ನ ವಯಸ್ಸಿಗೆ ಸಂಬಂಧಿಸಿದ ತಿದ್ದುಪಡಿ ಮಾಡಲಾದ ಹಾಗೂ ಸುಳ್ಳು ದಾಖಲೆಗಳನ್ನು ತನಿಖೆಯ ವೇಳೆ ಬಳಸಿಕೊಳ್ಳಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಅಂತಿಮ ಹಂತದಲ್ಲಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾ. ಪ್ರತಿಭಾ ಎಂ. ಸಿಂಗ್ ಮತ್ತು ನ್ಯಾ. ಮಧು ಜೈನ್ ಅವರನ್ನು ಒಳಗೊಂಡ ನ್ಯಾಯಪೀಠ, ಸಂತ್ರಸ್ತೆಯ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಪಟ್ಟಿ ಮಾಡಿದೆ.







