ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ವಿರುದ್ಧ ನಿಲ್ಲದ ಪೆಗಾಸಸ್ ಸ್ಪೈವೇರ್ ಬಳಕೆ
ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ʼದಿ ವಾಷಿಂಗ್ಟನ್ ಪೋಸ್ಟ್ʼ ತನಿಖಾ ವರದಿ
ಸಿದ್ಧಾರ್ಥ್ ವರದರಾಜನ್ | Photo: PTI
ಹೊಸದಿಲ್ಲಿ: ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ದಿ ವಾಷಿಂಗ್ಟನ್ ಪೋಸ್ಟ್ ಭಾರತದಲ್ಲಿಯ ಪ್ರತಿಷ್ಠಿತ ಪತ್ರಕರ್ತರ ವಿರುದ್ಧ ಎನ್ಎಸ್ಒ ಗ್ರೂಪ್ ನ ಪೆಗಾಸಸ್ ಸ್ಪೈವೇರ್ ನ ನಿರಂತರ ಬಳಕೆಯ ಕುರಿತು ಹೊಸ ಆಘಾತಕಾರಿ ವಿವರಗಳನ್ನು ಬಹಿರಂಗಗೊಳಿಸಿವೆ.
ಈ ಪತ್ರಕರ್ತರಲ್ಲಿ ಹಿಂದೆ ಇದೇ ಸ್ಪೈವೇರ್ ನ ದಾಳಿಗೆ ತುತ್ತಾಗಿದ್ದ ಓರ್ವರು ಸೇರಿದ್ದಾರೆ.
ಸುದ್ದಿ ಜಾಲತಾಣ ʼದಿ ವೈರ್ʼ ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಮತ್ತು ʼದಿ ಆರ್ಗನೈಸ್ಡ್ ಕ್ರೈಂ ಆ್ಯಂಡ್ ಕರಪ್ಶನ್ ರಿಪೋರ್ಟ್ ಪ್ರಾಜೆಕ್ಟ್ʼ (ಒಸಿಸಿಆರ್ಪಿ)ನ ದಕ್ಷಿಣ ಏಶ್ಯಾ ಸಂಪಾದಕ ಆನಂದ ಮಂಗ್ನಾಲೆ ಅವರು ತಮ್ಮ ಐಫೋನ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ನ ಇತ್ತೀಚಿನ ದಾಳಿಗೆ ಗುರಿಯಾದ ಪತ್ರಕರ್ತರಲ್ಲಿ ಸೇರಿದ್ದಾರೆ ಎನ್ನುವುದನ್ನು ಆಮ್ನೆಸ್ಟಿ ಇಂಟರ್ನ್ಯಾಷನಲ್ ನ ಸೆಕ್ಯೂರಿಟಿ ಲ್ಯಾಬ್ ನಡೆಸಿದ ವಿಧಿವಿಜ್ಞಾನ ತನಿಖೆಗಳು ದೃಢಪಡಿಸಿವೆ. ಇಂತಹ ತೀರ ಇತ್ತೀಚಿನ ದಾಳಿ 2023 ಅಕ್ಟೋಬರ್ ನಲ್ಲಿ ನಡೆದಿತ್ತು.
‘ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಭಾರತದಲ್ಲಿಯ ಪತ್ರಕರ್ತರು ಕಾನೂನುಬಾಹಿರ ಕಣ್ಗಾವಲು ಬೆದರಿಕೆಯನ್ನು ಎದುರಿಸುತ್ತಿರುವುದು ಹೆಚ್ಚುತ್ತಿದೆ. ಇದರ ಜೊತೆಗೆ ಕರಾಳ ಕಾನೂನುಗಳಡಿ ಜೈಲುವಾಸ,ಸುಳ್ಳು ಆರೋಪಗಳು,ಕಿರುಕುಳ ಮತ್ತು ಬೆದರಿಕೆಗಳನ್ನು ಅವರು ಎದುರಿಸುತ್ತಿದ್ದಾರೆ ಎನ್ನುವುದನ್ನು ನಮ್ಮ ಇತ್ತೀಚಿನ ಅಧ್ಯಯನಗಳು ತೋರಿಸಿವೆ ’ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಸೆಕ್ಯೂರಿಟಿ ಲ್ಯಾಬ್ ನ ಮುಖ್ಯಸ್ಥ ಡಾನ್ಚಾ ಒ ಸಿಯರ್ಭೇಲ್ ಹೇಳಿದ್ದಾರೆ.
ಪದೇ ಪದೇ ಬಹಿರಂಗಗೊಳಿಸಿದ್ದರೂ ಭಾರತದಲ್ಲಿ ಪೆಗಾಸಸ್ ಬಳಕೆಯ ಹೊಣೆಗಾರಿಕೆಯ ಕೊರತೆಯಿದ್ದು,ಇದು ನಾಚಿಕೆಗೇಡಿನದಾಗಿದೆ. ಇದು ಈ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ನಿರ್ಭೀತಿಯ ಭಾವನೆಯನ್ನು ಹೆಚ್ಚಿಸುತ್ತದೆ ಅಷ್ಟೇ ಎಂದರು.
|ಪೆಗಾಸಸ್ ಚಟುವಟಿಕೆ ಬಹಿರಂಗಗೊಳಿಸಿದ ವಿಧಿವಿಜ್ಞಾನ ಸಾಕ್ಷ್ಯ|
ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಸೆಕ್ಯೂರಿಟಿ ಲ್ಯಾಬ್ 2023,ಜೂನ್ನಲ್ಲಿ ತನ್ನ ನಿಯಮಿತ ತಾಂತ್ರಿಕ ನಿಗಾ ಪ್ರಕ್ರಿಯೆ ಸಂದರ್ಭ ಭಾರತದಲ್ಲಿ ವ್ಯಕ್ತಿಗಳಿಗೆ ಮತ್ತೆ ಪೆಗಾಸಸ್ ಸ್ಪೈವೇರ್ ನ ಬೆದರಿಕೆಗಳ ಸೂಚನೆಗಳನ್ನು ಗಮನಿಸಿತ್ತು. ಇದಕ್ಕೂ ಕೆಲವು ತಿಂಗಳುಗಳ ಮೊದಲು ಮಾಧ್ಯಮಗಳು ಭಾರತ ಸರಕಾರವು ನೂತನ ವಾಣಿಜ್ಯಿಕ ಸ್ಪೈವೇರ್ ಸಿಸ್ಟಮ್ ಅನ್ನು ಖರೀದಿಸಲು ಬಯಸಿದೆ ಎಂದು ವರದಿ ಮಾಡಿದ್ದವು.
ಅಕ್ಟೋಬರ್ 2023ರಲ್ಲಿ ಆ್ಯಪಲ್ ‘ಸರಕಾರಿ ಪ್ರಾಯೋಜಿತ ದಾಳಿಕೋರ’ರಿಂದ ಗುರಿಯಾಗಿದ್ದಿರಬಹುದಾದ ಐಫೋನ್ ಬಳಕೆದಾರರಿಗೆ ಜಾಗತಿಕವಾಗಿ ಎಚ್ಚರಿಕೆಯ ನೋಟಿಸ್ ಗಳನ್ನು ಹೊರಡಿಸಿತ್ತು. ಭಾರತದಲ್ಲಿ 20ಕ್ಕೂ ಅಧಿಕ ಪತ್ರಕರ್ತರು ಮತ್ತು ಪ್ರತಿಪಕ್ಷಗಳ ರಾಜಕಾರಣಿಗಳು ಇಂತಹ ನೋಟಿಸ್ ಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿತ್ತು.
ಪರಿಣಾಮವಾಗಿ ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಸೆಕ್ಯೂರಿಟಿ ಲ್ಯಾಬ್ ಸಿದ್ಧಾರ್ಥ ವರದರಾಜನ್ ಮತ್ತು ಆನಂದ ಮಂಗ್ನಾಲೆ ಸೇರಿದಂತೆ ವಿಶ್ವಾದ್ಯಂತ ಈ ನೋಟಿಸ್ಗಳನ್ನು ಸ್ವೀಕರಿಸಿದ್ದ ವ್ಯಕ್ತಿಗಳ ಫೋನ್ಗಳ ವಿಧಿವಿಜ್ಞಾನ ವಿಶ್ಲೇಷಣೆಯನ್ನು ಕೈಗೆತ್ತಿಕೊಂಡಿತ್ತು. ವರದರಾಜನ್ ಮತ್ತು ಮಂಗ್ನಾಲೆ ಅವರ ಫೋನ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ನ ಚಟುವಟಿಕೆಯ ಕುರುಹುಗಳನ್ನು ಅದು ಪತ್ತೆ ಹಚ್ಚಿತ್ತು.
ಮಂಗ್ನಾಲೆ ಅದಾನಿ ಗ್ರೂಪ್ ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂಬ ಆರೋಪಗಳ ಕುರಿತು ಬರಹವನ್ನು ಸಿದ್ಧಗೊಳಿಸುತ್ತಿದ್ದ ಸಂದರ್ಭದಲ್ಲೇ ಪೆಗಾಸಸ್ ದಾಳಿಯ ಪ್ರಯತ್ನಕ್ಕೆ ಗುರಿಯಾಗಿದ್ದರು.
2018ರಲ್ಲಿ ವರದರಾಜನ್ ಅವರ ಫೋನ್ ಹೇಗೆ ಪೆಗಾಸಸ್ ದಾಳಿಯ ಗುರಿಯಾಗಿತ್ತು ಎನ್ನುವುದನ್ನು ಆಮ್ನೆಸ್ಟಿ ಇಂಟರ್ನ್ಯಾಷನಲ್ ಈ ಹಿಂದೆ ದಾಖಲಿಸಿತ್ತು. ನಂತರ ಪೆಗಾಸಸ್ ಯೋಜನೆ ಬಹಿರಂಗ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು 2021ರಲ್ಲಿ ರಚಿಸಿದ್ದ ತಾಂತ್ರಿಕ ಸಮಿತಿಯು ಅವರ ಸಾಧನಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೊಳಪಡಿಸಿತ್ತು. ಸಮಿತಿಯು 2022ರಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಿತ್ತು,ಆದರೆ ಸರ್ವೋಚ್ಚ ನ್ಯಾಯಾಲಯವು ತಾಂತ್ರಿಕ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿಲ್ಲ. ಆದಾಗ್ಯೂ, ತಾಂತ್ರಿಕ ಸಮಿತಿಯ ತನಿಖೆಗೆ ಭಾರತೀಯ ಅಧಿಕಾರಿಗಳು ಸಹಕರಿಸಿರಲಿಲ್ಲ ಎನ್ನುವುದನ್ನು ಅದು ಗಮನಿಸಿತ್ತು.
ವರದರಾಜನ್ ಮತ್ತು ಮಂಗ್ನಾಲೆ ಅವರ ಸಾಧನಗಳನ್ನು ಗುರಿಯಾಗಿಸಿಕೊಂಡಿದ್ದು ಒಬ್ಬನೇ ಪೆಗಾಸಸ್ ಬಳಕೆದಾರ ಎನ್ನುವುದನ್ನೂ ವಿಶ್ಲೇಷಣೆಯು ಬಯಲಿಗೆಳೆದಿದೆ.
ವರದರಾಜನ್ ಪ್ರಕರಣದಲ್ಲಿ ಪೆಗಾಸಸ್ ದಾಳಿ ಯಶಸ್ವಿಯಾಗಿತ್ತು ಎನ್ನುವುದಕ್ಕೆ ಯಾವುದೇ ಸೂಚನೆಯಿಲ್ಲ.
ಪತ್ರಕರ್ತರನ್ನು ಕೇವಲ ಅವರ ಕೆಲಸಗಳಿಗಾಗಿ ಗುರಿಯಾಗಿಸಿಕೊಳ್ಳುವುದು ಅವರ ಖಾಸಗಿತನದ ಮೇಲೆ ಕಾನೂನುಬಾಹಿರ ದಾಳಿಗೆ ಸಮನಾಗಿದೆ ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಕಾನೂನುಬಾಹಿರ ಕಣ್ಗಾವಲಿನಿಂದ ಜನರಿಗೆ ರಕ್ಷಣೆಯನ್ನು ನೀಡುವ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆ ಭಾರತ ಸೇರಿದಂತೆ ಎಲ್ಲ ದೇಶಗಳ ಬಾಧ್ಯತೆಯಾಗಿದೆ ಎಂದು ಸಿಯರ್ಭೇಲ್ ಹೇಳಿದರು.
ತಾನು ತನ್ನ ಉತ್ಪನ್ನಗಳನ್ನು ಕೇವಲ ಸರಕಾರಿ ಗುಪ್ತಚರ ಮತ್ತು ಕಾನೂನು ಜಾರಿ ಏಜೆನ್ಸಿಗಳಿಗೆ ಮಾರಾಟ ಮಾಡುತ್ತೇನೆ ಎಂದು ಪೆಗಾಸಸ್ ಸ್ಪೈವೇರ್ ಉತ್ಪಾದಕ ಇಸ್ರೇಲ್ನ ಎನ್ಎಸ್ಒ ಗ್ರೂಪ್ ಹೇಳಿದೆ. ತಾವು ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದ್ದೇವೆಯೇ ಅಥವಾ ಅದನ್ನು ಬಳಸಿದ್ದೇವೆಯೇ ಎಂಬ ಬಗ್ಗೆ ಭಾರತೀಯ ಅಧಿಕಾರಿಗಳು ಈವರೆಗೆ ಸ್ಪಷ್ಟ ಅಥವಾ ಪಾರದರ್ಶಕ ಉತ್ತರವನ್ನು ನೀಡಿಲ್ಲ.