ಆಗ್ರಾದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ದುರಂತ : ನೀರಿನಲ್ಲಿ ಕೊಚ್ಚಿ ಹೋದ 9 ಮಂದಿ, ಮೂವರ ಮೃತದೇಹ ಪತ್ತೆ

Photo | PTI
ಆಗ್ರಾ, ಅ.3: ಉತ್ತರ ಪ್ರದೇಶದ ಆಗ್ರಾದ ಡುಂಗರ್ವಾಲಾ ಗ್ರಾಮದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಉತಂಗನ್ ನದಿಗೆ ಇಳಿದ 9 ಮಂದಿ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದು, ಈ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ.
ಐವರು ಇನ್ನೂ ನಾಪತ್ತೆಯಾಗಿದ್ದು, ಒಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಕಾರ್ಯಾಚರಣೆಗೆ SDRF ತಂಡಗಳನ್ನು ನಿಯೋಜಿಸಲಾಗಿದೆ.
ಮೃತಪಟ್ಟವರನ್ನು ಗಗನ್ ಸಿಂಗ್(28) ಹಾಗೂ ಓಂಪಾಲ್ ಚಂದ್(32) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಎರಡು ವಿಗ್ರಹಗಳನ್ನು ವಿಸರ್ಜಿಸಲು ಗ್ರಾಮಸ್ಥರು ನದಿಗೆ ಇಳಿದ ವೇಳೆ ಈ ದುರಂತ ಸಂಭವಿಸಿದೆ. ಪ್ರವಾಹದ ತೀವ್ರತೆಗೆ ಸಿಲುಕಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಖೇರಾಗಢ ಪೊಲೀಸ್ ಠಾಣೆಯ ಉಸ್ತುವಾರಿ ಮದನ್ ಸಿಂಗ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ನದಿಗೆ ಇಳಿದು ಒಬ್ಬರನ್ನು ರಕ್ಷಣೆ ಮಾಡಿದರು. ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
“ದುರ್ಗಾದೇವಿ ವಿಗ್ರಹ ವಿಸರ್ಜನೆಗಾಗಿ ಜಿಲ್ಲಾಡಳಿತ ವಿಶೇಷ ಸ್ಥಳದ ವ್ಯವಸ್ಥೆ ಮಾಡಿತ್ತು. ಆದರೆ ಗ್ರಾಮಸ್ಥರು ಬೇರೆ ಸ್ಥಳದಲ್ಲಿ ನದಿಗೆ ಇಳಿದಿದ್ದರು. ಎರಡನೇ ವಿಗ್ರಹ ವಿಸರ್ಜನೆ ವೇಳೆ ಅವರು ನೀರಿನ ಸೆಳೆತಕ್ಕೆ ಸಿಲುಕಿದರು,” ಎಂದು ಆಗ್ರಾ ಜಿಲ್ಲಾಧಿಕಾರಿ ಅರವಿಂದ್ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ.







