ಆನ್ ಲೈನ್ ಗೇಮ್ ನಲ್ಲಿ ತಂದೆಯ ಖಾತೆಯಲ್ಲಿದ್ದ 14 ಲಕ್ಷ ಕಳೆದುಕೊಂಡ ಬಾಲಕ ಆತ್ಮಹತ್ಯೆ!

ಸಾಂದರ್ಭಿಕ ಚಿತ್ರ (credit: freepik.com)
ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದ ಮೋಹನ್ ಲಾಲ್ಗಂಜ್ ಪ್ರದೇಶದಲ್ಲಿ 13 ವರ್ಷದ ಬಾಲಕನೊಬ್ಬ ಆನ್ಲೈನ್ ಗೇಮ್ ಗೆ ತನ್ನ ತಂದೆಯ ಬ್ಯಾಂಕ್ ಖಾತೆಯಲ್ಲಿದ್ದ ಸಂಪೂರ್ಣ 14 ಲಕ್ಷ ರೂಪಾಯಿ ಮೊತ್ತವನ್ನು ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಮೋಹನ್ ಲಾಲ್ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಡಿ.ಕೆ. ಸಿಂಗ್ ಅವರು, ಆರನೇ ತರಗತಿಯಲ್ಲಿದ್ದ ಬಾಲಕ, ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.
"ಬಾಲಕನ ತಂದೆ ಬ್ಯಾಂಕ್ ಶಾಖೆಗೆ ತೆರಳಿದಾಗ ಖಾತೆಯಲ್ಲಿ ಯಾವುದೇ ಹಣ ಉಳಿದಿಲ್ಲವೆಂದು ತಿಳಿದು ಬೆಚ್ಚಿಬಿದ್ದರು. ಬಳಿಕ ಅವರು ಮನೆಗೆ ಬಂದು ಕುಟುಂಬ ಸದಸ್ಯರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಅದನ್ನು ಕೇಳಿದ ಬಾಲಕ ಆತಂಕಗೊಂಡು, ಓದುತ್ತೇನೆಂದು ಹೇಳಿ ಛಾವಣಿಯ ಮೇಲಿರುವ ತನ್ನ ಕೋಣೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ," ಎಂದು ಅವರು ವಿವರಿಸಿದರು.
ರಾತ್ರಿ ಅವನ ಸಹೋದರಿ ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸಹೋದರಿಯ ಕಿರುಚಾಟಕ್ಕೆ ಕುಟುಂಬ ಸದಸ್ಯರು ಕೋಣೆಗೆ ಧಾವಿಸಿ ಬಂದು, ಬಾಲಕನನ್ನು ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿದ್ದಾನೆಂದು ಘೋಷಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.





