ಉತ್ತರ ಪ್ರದೇಶ | ಎಸ್ಪಿ ತಾಯಿಗೆ ಚಿಕಿತ್ಸೆ ನೀಡಲು ತುರ್ತು ಘಟಕದಲ್ಲಿದ್ದ ವೈದ್ಯರನ್ನೇ ಬಲವಂತವಾಗಿ ಕರೆದೊಯ್ದು ಪೊಲೀಸರು!

ಸಾಂದರ್ಭಿಕ ಚಿತ್ರ
ಲಕ್ನೊ: ಅಧಿಕಾರ ದುರುಪಯೋಗದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಿಂದ ವರದಿಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ನೀಡಲು, ತುರ್ತು ಕರ್ತವ್ಯದಲ್ಲಿ ನಿರತರಾಗಿದ್ದ ವೈದ್ಯರನ್ನು ಬಲವಂತವಾಗಿ ಕಳಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ಘಟನೆಯ ನಂತರ, ಕರ್ತವ್ಯವನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿಗಳು, ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.
ಗುರುವಾರ ರಾತ್ರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯನಿರತರಾಗಿದ್ದ ಡಾ. ರಾಹುಲ್ ಬಾಬು ರಜಪೂತ್ ಅವರನ್ನು ಸಂಧಿಸಿರುವ ನಾಲ್ವರು ಪೊಲೀಸರು, ವಿಶೇಷ ಪೊಲೀಸ್ ವರಿಷ್ಠಾಧಿಕಾರಿಯ ತಾಯಿಗೆ ಚಿಕಿತ್ಸೆ ನೀಡಲು ತಮ್ಮೊಂದಿಗೆ ಬರುವಂತೆ ಅವರಿಗೆ ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ.
ಆದರೆ, ರೋಗಿಗಳು ತುರ್ತು ಚಿಕಿತ್ಸೆಗಾಗಿ ನಿರಂತರವಾಗಿ ಆಸ್ಪತ್ರೆಗೆ ಬರುತ್ತಿರುತ್ತಾರಾದ್ದರಿಂದ, ನಾನು ನನ್ನ ಸ್ಥಾನವನ್ನು ತೊರೆಯಲು ಸಾಧ್ಯವಿಲ್ಲ ಎಂದು ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಿಶೇಷ ಪೊಲೀಸ್ ವರಿಷ್ಠಾಧಿಕಾರಿಯ ತಾಯಿಯ ಆರೋಗ್ಯವನ್ನು ಪರಿಶೀಲಿಸಲು ನಾನು ಆಸ್ಪತ್ರೆಯ ಇತರೆ ಸಿಬ್ಬಂದಿಗಳನ್ನು ಕಳುಹಿಸಿಕೊಡುತ್ತೇನೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ವೈದ್ಯರ ನಿರಾಕರಣೆಯಿಂದ ಸಿಟ್ಟಿಗೆದ್ದ ಪೊಲೀಸರು, ತಮ್ಮೊಂದಿಗೆ ಸದರಿ ವೈದ್ಯರು ಹಾಗೂ ಔಷಧ ವಿತರಕರನ್ನು ತಮ್ಮೊಂದಿಗೆ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ವಿರೋಧಿಸಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರು ಮುಷ್ಕರ ನಡೆಸಿದ್ದು, ತಪ್ಪು ಎಸಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಮ್ಮ ವೈದ್ಯಕೀಯ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.
ಆದರೆ, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಮುಷ್ಕರನಿರತ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರಿಗೆ ಭರವಸೆ ನೀಡಿರುವ ಹಿರಿಯ ಆರೋಗ್ಯಾಧಿಕಾರಿಗಳು, ಅವರು ತಮ್ಮ ಮುಷ್ಕರ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿಗಳ ಪ್ರಕಾರ, ವೈದ್ಯರೊಂದಿಗೆ ದುರ್ವರ್ತನೆ ತೋರಿದ ಪೊಲೀಸರನ್ನು ಪೊಲೀಸ್ ಪಡೆಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ, ನಾನು ನನ್ನ ತಾಯಿಗೆ ಚಿಕಿತ್ಸೆ ನೀಡಲು ಖಾಸಗಿ ವೈದ್ಯರನ್ನು ಕರೆದುಕೊಂಡು ಬರುವಂತೆ ಪೊಲೀಸರಿಗೆ ಸೂಚಿಸಿದ್ದೆ. ಆದರೆ, ಅವರು ಜಿಲ್ಲಾ ಆಸ್ಪತ್ರೆಯ ವೈದ್ಯರನ್ನು ಕರೆ ತಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.







