ಉತ್ತರ ಪ್ರದೇಶ | ಕಳ್ಳತನದ ಆರೋಪದಲ್ಲಿ ಆರ್ಪಿಎಫ್ ವಶದಲ್ಲಿದ್ದ ದಲಿತ ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ | Photo Credit : indianexpress.com
ಲಕ್ನೋ,ನ.6: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಕಳ್ಳತನದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದ್ದ ದಲಿತ ವ್ಯಕ್ತಿಯೋರ್ವ ಕಸ್ಟಡಿಯಲ್ಲಿ ಮೃತಪಟ್ಟಿದ್ದು, ಚಿತ್ರಹಿಂಸೆ ನೀಡಲಾಗಿತ್ತು ಎಂದು ವ್ಯಕ್ತಿಯ ಕುಟುಂಬವು ಆರೋಪಿಸಿದೆ. ರೈಲ್ವೆ ರಕ್ಷಣಾ ಪಡೆಯ(ಆರ್ಪಿಎಫ್) ಮೂವರು ಸಿಬ್ಬಂದಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಇತ್ತೀಚಿಗೆ ಬರುವಾ ಚಕ್ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿನಿಂದ ತೈಲ ಕಳ್ಳತನಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ಸೋನಕರ್(35) ಅವರನ್ನು ಮಂಗಳವಾರ ಬೆಳಿಗ್ಗೆ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಬಳಿಕ ಆರ್ಪಿಎಫ್ ಸಿಬ್ಬಂದಿ ಅವರನ್ನು ಸರಕಾರಿ ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದರಾದರೂ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಸಬ್-ಇನ್ಸ್ಪೆಕ್ಟರ್ಗಳಾದ ಸುರೇಂದ್ರಕುಮಾರ್ ಮತ್ತು ಕರಣ್ ಸಿಂಗ್ ಯಾದವ್ ಹಾಗೂ ಕಾನ್ಸ್ಟೇಬಲ್ ಅಮಿತ್ ಕುಮಾರ್ ಯಾದವ್ ಅವರನ್ನು ಅಮಾನತುಗೊಳಿಸಿದ್ದು, ಕಸ್ಟಡಿ ಸಾವಿನ ಆರೋಪ ಕುರಿತು ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿದೆ ಎಂದು ಆರ್ಪಿಎಫ್ನ ಸೀನಿಯರ್ ಕಮಾಂಡಂಟ್ ಚಂದ್ರಮೋಹನ ಮಿಶ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವುದನ್ನು ಗೊಂಡಾ ಪೋಲಿಸರು ದೃಢಪಡಿಸಿದ್ದಾರೆ.
ಆರ್ಪಿಎಫ್ ಸಿಬ್ಬಂದಿ ತನ್ನ ಸೋದರನನ್ನು ಮನೆಯಿಂದ ಕರೆದೊಯ್ದಿದ್ದರು ಮತ್ತು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮೃತರ ಸೋದರ ರಾಜು ಸೋನಕರ್ ದೂರು ಸಲ್ಲಿಸಿದ್ದರು. ಸಂಜಯ್ ಮೃತಪಟ್ಟಿದ್ದಾರೆ ಮತ್ತು ಅವರ ಮೃತದೇಹ ಆಸ್ಪತ್ರೆಯಲ್ಲಿದೆ ಎಂದು ನಂತರ ಕುಟುಂಬಕ್ಕೆ ಗೊತ್ತಾಗಿತ್ತು.
ಕಳ್ಳತನ ಪ್ರಕರಣದ ವಿವರಗಳನ್ನು ನೀಡಿದ ಮಿಶ್ರಾ, ರೈಲಿನಿಂದ ಕಳ್ಳತನದ ಬಳಿಕ ಗೊಂಡಾ ಆರ್ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಆರ್ಪಿಎಫ್ ತಂಡವು ಪಡೆದುಕೊಂಡಿದ್ದ ವೀಡಿಯೊ ಮೂವರು ವ್ಯಕ್ತಿಗಳು ರೈಲಿನಿಂದ ತೈಲ ಕಳ್ಳತನ ಮಾಡಿ ಸಮೀಪದ ಕಬ್ಬಿನ ಗದ್ದೆಯಲ್ಲಿ ಬಚ್ಚಿಟ್ಟುಕೊಂಡಿದ್ದನ್ನು ತೋರಿಸಿತ್ತು. ಶಂಕಿತರ ಪೈಕಿ ಓರ್ವನನ್ನು ತಂಡವು ಹಿಡಿದಿದ್ದು, ಆತ ಸಂಜಯ್ ಹೆಸರನ್ನು ಹೇಳಿದ್ದ. ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಆರ್ಪಿಎಫ್ ಸಿಬ್ಬಂದಿಗಳು ಅವರ ಬಳಿಯಿದ್ದ ತೈಲವನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಆರೋಪಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಸಾವಿನ ಕಾರಣ ತಿಳಿದುಬಂದಿಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯು ಹೇಳಿದೆ. ಕಾರಣವನ್ನು ತಿಳಿದುಕೊಳ್ಳಲು ಇನ್ನಷ್ಟು ತನಿಖೆಗಾಗಿ ವೈದ್ಯರು ವಿಸೆರಾ(ಆಂತರಿಕ ಅಂಗಗಳು)ವನ್ನು ಸಂರಕ್ಷಿಸಿಟ್ಟಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ ಗೊಂಡಾ ಸಿಟಿ ಸರ್ಕಲ್ ಆಫೀಸರ್ ಆನಂದ್ ಕುಮಾರ್ ರಾಯ್ ಅವರು, ಒಂದೆರಡು ತರಚು ಗಾಯಗಳನ್ನು ಬಿಟ್ಟರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ ಮತ್ತು ಈ ತರಚು ಗಾಯಗಳು ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಹೇಳಿದರು.







