ಉತ್ತರ ಪ್ರದೇಶ | ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಣೆ: ವೈದ್ಯೆಯ ಅಮಾನುಷ ವರ್ತನೆಗೆ ಖಂಡನೆ

ಸಾಂದರ್ಭಿಕ ಚಿತ್ರ
ಲಕ್ನೊ: ಧರ್ಮದ ಆಧಾರದ ಮೇಲೆ ಗರ್ಭಿಣಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ಮೂಡಿಸಿದೆ.
ಸೆಪ್ಟೆಂಬರ್ 30ರಂದು, ಜಿಲ್ಲಾ ಮಹಿಳಾ ಆಸ್ಪತ್ರೆಗೆ ಗರ್ಭಿಣಿ ಶಮಾ ಪರ್ವೀನ್ ಅವರನ್ನು ಅವರ ಪತಿ ನವಾಝ್ ವೈದ್ಯಕೀಯ ತಪಾಸಣೆ, ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು. ಆದರೆ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆ “ಅವರು ಮುಸ್ಲಿಂ ಸಮುದಾಯದವರು, ಅವರಿಗೆ ನಾನು ಚಿಕಿತ್ಸೆ ನೀಡುವುದಿಲ್ಲ. ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ಹೇಳಿ ಶಮಾ ಪರ್ವೀನ್ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು ಎಂದು ಆರೋಪಿಸಲಾಗಾದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಮಾ ಪರ್ವೀನ್ ಅವರು “ನನ್ನನ್ನೂ ಸೇರಿದಂತೆ ಮುಸ್ಲಿಂ ಸಮುದಾಯದ ಇಬ್ಬರು ಮಹಿಳೆಯರಿಗೆ ವೈದ್ಯೆ ಚಿಕಿತ್ಸೆ ನೀಡಲಿಲ್ಲ” ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಘಟನೆಯ ವೀಡಿಯೊ ವ್ಯಾಪಕವಾಗಿ ವೈರಲ್ ಆದ ಬಳಿಕ, ಜಿಲ್ಲಾ ಆರೋಗ್ಯಾಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವೈದ್ಯೆಯಿಂದ ವರದಿ ಕೇಳಲಾಗಿದೆ ಮತ್ತು ಆರೋಪಗಳು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







