ಉತ್ತರ ಪ್ರದೇಶ | ಸಭಾಂಗಣದಲ್ಲಿ ವಿವಾಹವಾಗಿದ್ದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ!

ಸಾಂದರ್ಭಿಕ ಚಿತ್ರ
ಬಲ್ಲಿಯಾ: ದಲಿತ ಕುಟುಂಬವೊಂದು ಸಭಾಂಗಣವೊಂದರಲ್ಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡ ಕಾರಣಕ್ಕೆ, ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ದೊಣ್ಣೆಗಳು ಹಾಗೂ ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ರಾಸ್ರಾದಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ನಡೆದಿರುವ ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
"ದಲಿತರಾಗಿ ನೀವೇಗೆ ಸಭಾಂಗಣದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಿದಿರಿ?" ಎಂದು ಹಲ್ಲೆಕೋರರು ಪ್ರಶ್ನಿಸಿದರು ಎಂದು ಆರೋಪಿಸಲಾಗಿದೆ. ಆದರೆ, ಈವರೆಗೆ ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ.
ಈ ಘಟನೆಯ ಸಂತ್ರಸ್ತರೊಬ್ಬರ ಸಹೋದರ ರಾಘವೇಂದ್ರ ಗೌತಮ್ ಎಂಬುವವರು ನೀಡಿದ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ದೊಣ್ಣೆಗಳು ಹಾಗೂ ಕಬ್ಬಿಣದ ಸಲಾಕೆಗಳನ್ನು ಹಿಡಿದುಕೊಂಡಿದ್ದ ಸುಮಾರು 20 ಮಂದಿ ದುಷ್ಕರ್ಮಿಗಳ ಗುಂಪು ಶುಕ್ರವಾರ ರಾತ್ರಿ ಸುಮಾರು 10.30ರ ವೇಳೆಗೆ ಸ್ವಯಂವರ ಸಭಾಂಗಣಕ್ಕೆ ನುಗ್ಗಿ, ನಮ್ಮ ಮೇಲೆ ಹಲ್ಲೆ ನಡೆಸಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಗುಂಪಿನ ನೇತೃತ್ವವನ್ನು ಅಮನ್ ಸಾಹ್ನಿ, ದೀಪಕ್ ಸಾಹ್ನಿ ಹಾಗೂ ಅಖಿಲೇಶ್ ಎಂಬುವವರು ವಹಿಸಿದ್ದರು ಎಂದು ಅವರು ಆಪಾದಿಸಿದ್ದಾರೆ. ಆ ಗುಂಪಿನಲ್ಲಿ ಮಲ್ಲಾಹ್ ತೋಲಿ ಪ್ರದೇಶದ ಇನ್ನೂ 15-20 ಮಂದಿ ಅಪರಿಚಿತ ವ್ಯಕ್ತಿಗಳೂ ಇದ್ದರು ಎಂದೂ ಅವರು ದೂರಿದ್ದಾರೆ.
ಈ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೂಕ್ತ ಸೆಕ್ಷನ್ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ಕಾಯ್ದೆಯ ಕಾನೂನುಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಸ್ರಾ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಪಿನ್ ಸಿಂಗ್, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.







