ಉತ್ತರ ಪ್ರದೇಶ : ವ್ಯಕ್ತಿಯನ್ನು ಥಳಿಸಿ ಹತ್ಯೆ

ಸೋನಭದ್ರ, ಅ. 24: ಐವತ್ತೆರೆಡು ವರ್ಷದ ವ್ಯಕ್ತಿಯೋರ್ವನನ್ನು ಸಂಬಂಧಿಯೋರ್ವ ದೊಣ್ಣೆಯಿಂದ ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಸೋನಭದ್ರ ಬಳಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತನನ್ನು ಉಮೇಶ್ ಪತಾರಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ದುದ್ದಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲ್ದೇವಾ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಉಮೇಶ್ ಪಠಾರಿ ಜಾನಪದ ಕಾರ್ಯಕ್ರಮ ‘ಬಿರ್ಹಾ’ದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಸಂಬಂಧಿ ಹಾಗೂ ಬೆಲ್ಚ ಗ್ರಾಮದ ನಿವಾಸಿ ದಾರಾ ಪತಾರಿ ಕುಡಿದ ಮತ್ತಿನಲ್ಲಿ ಆತನ ಅತ್ತೆಗೆ ನಿಂದಿಸುತ್ತಿರುವುದು ಹಾಗೂ ಕಿರುಕುಳ ನೀಡುವುದನ್ನು ನೋಡಿದ ಎಂದು ದುದ್ದಿ ಪೊಲೀಸ್ ಠಾಣೆಯ ಅಧಿಕಾರಿ ಸ್ವತಂತ್ರ್ಯ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಉಮೇಶ್ ಪತಾರಿ ಮಧ್ಯಪ್ರವೇಶಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದಾಗ ದಾರಾ ತನ್ನ ತಾಳ್ಮೆ ಕಳೆದುಕೊಂಡ ಹಾಗೂ ಉಮೇಶನ ತಲೆಗೆ ದೊಣ್ಣೆಯಿಂದ ಹೊಡೆದ. ಇದರಿಂದ ಉಮೇಶ ಗಂಭೀರ ಗಾಯಗೊಂಡ. ಉಮೇಶನಿಗೆ ದಾಳಿ ನಡೆಸುವುದನ್ನು ಗಮನಿಸಿದ ಆತನ ಪತ್ನಿ ತಾರಾ ದೇವಿ ಧಾವಿಸಿ ತಡೆಯಲು ಪ್ರಯತ್ನಿಸಿದರು. ಆದರೆ, ದಾರಾ ಆಕೆಗೆ ಕೂಡ ಥಳಿಸಿದ್ದಾನೆ. ಗಾಯಗೊಂಡ ದಂಪತಿಯನ್ನು ಸ್ಥಳೀಯರು ದುಧಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ತೀವ್ರ ಗಾಯಗೊಂಡಿದ್ದ ಉಮೇಶ ಕೊನೆಯುಸಿರೆಳೆದ. ತಾರಾದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.







