ಉತ್ತರ ಪ್ರದೇಶ | ಸಚಿವರ ವಿರುದ್ಧ ಎಬಿವಿಪಿ ಪ್ರತಿಭಟನೆ: ‘ಹಿಂದುಳಿದವರ’ ಓಲೈಕೆಗೆ ಮುಂದಾದ ಬಿಜೆಪಿ

ಸಾಂದರ್ಭಿಕ ಚಿತ್ರ | PC : PTI
ಲಕ್ನೋ,ಸೆ.5: ಬಾರಾಬಂಕಿಯ ವಿವಿಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಪೋಲಿಸರ ಲಾಠಿ ಪ್ರಹಾರದಿಂದ ಎಬಿವಿಪಿ ಸದಸ್ಯರು ಗಾಯಗೊಂಡ ಬಳಿಕ ಆಡಳಿತಾರೂಢ ಎನ್ಡಿಎ ನ ಮಿತ್ರಪಕ್ಷ ಸುಹೇಲದೇವ ಭಾರತೀಯ ಸಮಾಜ ಪಾರ್ಟಿ(ಎಸ್ಬಿಎಸ್ಪಿ)ಯ ನಾಯಕ ಹಾಗೂ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್ ಅವರು ನೀಡಿದ ಹೇಳಿಕೆ ವಿದ್ಯಾರ್ಥಿ ಸಂಘಟನೆಯನ್ನು ಕೆರಳಿಸಿದೆ.
ಬುಧವಾರ ಸಂಜೆ ಇಲ್ಲಿಯ ರಾಜಭರ್ ನಿವಾಸದ ಎದುರು ಪ್ರತಿಭಟನೆಯನ್ನು ನಡೆಸಿದ ಎಬಿವಿಪಿ ಕಾರ್ಯಕರ್ತರು ಕಲ್ಲುತೂರಾಟವನ್ನೂ ನಡೆಸಿದ್ದಾರೆ. ಎಸ್ಬಿಎಸ್ಪಿಯೊಂದಿಗೆ ಮೈತ್ರಿಗೆ ಹಾನಿಯನ್ನು ತಡೆಯಲು ಬಿಜೆಪಿ ಗುರುವಾರ ಧಾವಿಸಿದ್ದು ಬಿರುಕಿಗೆ ಸದ್ಯಕ್ಕೆ ತೇಪೆಯನ್ನು ಹಾಕಿದೆ.
ಬಾರಾಬಂಕಿಯ ಶ್ರೀರಾಮ ಸ್ವರೂಪ ಸ್ಮಾರಕ ವಿವಿಯಲ್ಲಿ ಅಕ್ರಮಗಳನ್ನು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಉದ್ರಿಕ್ತ ವಿದ್ಯಾರ್ಥಿಗಳನ್ನು ಚದುರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿದಾಗ ಕೆಲವರು ಗಾಯಗೊಂಡಿದ್ದರು.
ಘಟನೆಯ ಬಳಿಕ indian express ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜಭರ್, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವುದು ಪೋಲಿಸರ ಕೆಲಸವಾಗಿದೆ. ನೀವು ಗೂಂಡಾಗಿರಿಗೆ ಇಳಿದರೆ ಪೋಲಿಸರು ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಇದರಿಂದ ಕೆರಳಿದ ಎಬಿವಿಪಿ ಕಾರ್ಯಕರ್ತರು ಸಚಿವರ ಮನೆಗೆ ಮುತ್ತಿಗೆ ಹಾಕಿ ಅವರ ಪ್ರತಿಕೃತಿಯನ್ನು ಸುಟ್ಟು,ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಇನ್ನೊಂದು ಮಿತ್ರಪಕ್ಷ ನಿಷಾದ ಪಾರ್ಟಿಯೊಂದಿನ ಭಿನ್ನಾಭಿಪ್ರಾಯಗಳನ್ನು ಇತ್ತೀಚಿಗಷ್ಟೇ ಬಗೆಹರಿಸಿಕೊಂಡಿದ್ದ ಬಿಜೆಪಿಗೆ ಎಬಿವಿಪಿ ಪ್ರತಿಭಟನೆ ಹೊಸ ತಲೆನೋವನ್ನು ತಂದಿದೆ. ಪ್ರತಿಪಕ್ಷಗಳು ರಾಜಭರ್ ಅವರ ಬೆಂಬಲಕ್ಕೆ ನಿಂತಿವೆ. ಎಸ್ಬಿಎಸ್ಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ರಾಜಭರ್ ಸಮುದಾಯವು ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ರಾಜಭರ್ ಅವರ ಪುತ್ರ ಹಾಗೂ ಎಸ್ಬಿಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ರಾಜಭರ್ ಅವರು ಎಬಿವಿಪಿ ಕಾರ್ಯಕರ್ತರು ನಿಂದನಾತ್ಮಕ ಭಾಷೆಯನ್ನು ಬಳಸಿದ್ದರು ಎಂದು ಆರೋಪಿಸಿದ್ದಾರೆ.
ಸಚಿವರ ನಿವಾಸದ ಎದುರು ಪ್ರತಿಭಟನೆಯನ್ನು ‘ಅತ್ಯಂತ ಹಿಂದುಳಿದವರ ಮೇಲಿನ ದಾಳಿ’ ಎಂದು ಬಣ್ಣಿಸಿರುವ ಅವರು,ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಎಸ್ಬಿಎಸ್ಪಿಯ ಅಸಮಾಧಾನ ಬಿಜೆಪಿಗೆ ಕಳವಳವನ್ನುಂಟು ಮಾಡಿದ್ದು,ಮೈತ್ರಿಗೆ ಹಾನಿಯುಂಟಾಗುವುದನ್ನು ತಪ್ಪಿಸಲು ಮುಂದಾಗಿದೆ. ಗುರುವಾರ ಸಂಜೆ ಉಪ ಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಅವರು ರಾಜಭರ್ ಅವರನ್ನು ಭೇಟಿಯಾಗಿದ್ದರು. ಮೂಲಗಳ ಪ್ರಕಾರ ರಾಜಭರ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೊತೆಗೂ ಮಾತುಕತೆ ನಡೆಸಿದ್ದಾರೆ.
ಮೌರ್ಯ ಅವರೊಂದಿಗೆ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ರಾಜಭರ್, ‘ವಿವಿಯ ಹೊರಗೆ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರವನ್ನು ನಾವು ಖಂಡಿಸುತ್ತೇವೆ ಮತ್ತು ವಿವಿ ವಿರುದ್ಧದ ಆರೋಪಗಳ ವಿಚಾರಣೆಗೂ ಆಗ್ರಹಿಸುತ್ತೇವೆ. ಆದರೆ ಸಚಿವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಎಬಿವಿಪಿ ಕಾರ್ಯಕರ್ತರಲ್ಲಿ ಪ್ರತಿಪಕ್ಷ ಸಮಾಜವಾದಿ ಪಾರ್ಟಿ(ಎಸ್ಪಿ)ಯ ಗೂಂಡಾಗಳು ಸೇರಿಕೊಂಡಿರುವ ಸಾಧ್ಯತೆಯಿದೆ. ಈ ವ್ಯಕ್ತಿಗಳನ್ನು ಗುರುತಿಸುವಂತೆ ನಾವು ಕೋರಿಕೊಂಡಿದ್ದೇವೆ ’ ಎಂದು ತಿಳಿಸಿದರು.
ಬಾರಾಬಂಕಿ ಘಟನೆಗೆ ಸಂಬಂಧಿಸಿದಂತೆ ಓರ್ವ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮತ್ತು ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.







