ಸರ್ಕಾರದ ವಿರುದ್ಧ ಎತ್ತಿ ಕಟ್ಟಿದ ಆರೋಪ: ಡಾ. ಕಫೀಲ್ ಖಾನ್ ವಿರುದ್ಧ ಪ್ರಕರಣ ದಾಖಲು
ಡಾ. ಕಫೀಲ್ ಖಾನ್ (PTI)
ಲಕ್ನೊ: ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ಹಾಗೂ ಸಮಾಜವನ್ನು ವಿಭಜಿಸಲು ತಮ್ಮ ಕೃತಿಯನ್ನು ಹಂಚುತ್ತಿದ್ದಾರೆ ಎಂದು ಗೋರಖ್ ಪುರ ಆಸ್ಪತ್ರೆಯ ಅಮಾನತುಗೊಂಡಿರುವ ಮಕ್ಕಳ ತಜ್ಞ ಕಫೀಲ್ ಖಾನ್ ವಿರುದ್ಧ ಲಕ್ನೊ ನಿವಾಸಿಯೊಬ್ಬರು ನೀಡಿರುವ ದೂರನ್ನು ಆಧರಿಸಿ ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಕ್ನೊದ ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಕಫೀಲ್ ಖಾನ್ ಸೇರಿದಂತೆ ನಾಲ್ಕರಿಂದ ಐದು ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮನೀಶ್ ಶುಕ್ಲಾ ಎಂಬುವವರು ನೀಡಿರುವ ದೂರನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), ಸೆಕ್ಷನ್ 467 (ಹಣವನ್ನು ಸ್ವೀಕರಿಸಲು ನಕಲು ಸಹಿ), ಸೆಕ್ಷನ್ 468 (ವಂಚನೆಗಾಗಿ ನಕಲಿ ಸಹಿ), ಸೆಕ್ಷನ್ 465 (ನಕಲಿ ಸಹಿ), ಸೆಕ್ಷನ್ 471 (ನಕಲಿ ಸಹಿಯನ್ನೇ ಅಸಲಿ ಎಂಬಂತೆ ಬಳಸುವುದು), ಸೆಕ್ಷನ್ 504 (ಶಾಂತಿಭಂಗಗೊಳಿಸಲು ನಿಂದನೆ), ಸೆಕ್ಷನ್ 505 (ತೊಂದರೆಯನ್ನುಂಟು ಮಾಡುವ ಹೇಳಿಕೆಗಳು), ಸೆಕ್ಷನ್ 295 (ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲು ಪ್ರಾರ್ಥನಾ ಸ್ಥಳಗಳಿಗೆ ಅವಮಾನ), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಉದ್ರೇಕಿಸಲು ದುರುದ್ದೇಶಪೂರಿತ ಕೃತ್ಯ) ಹಾಗೂ ಸೆಕ್ಷನ್ 153ಬಿ (ರಾಷ್ಟ್ರೀಯ ಐಕ್ಯತೆಗೆ ಪೂರ್ವಗ್ರಹಪೀಡಿತ ಧಕ್ಕೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶುಕ್ಲಾ ಪ್ರಕಾರ, ಕಫೀಲ್ ಖಾನ್ ಗುಪ್ತವಾಗಿ ಕೃತಿಯೊಂದನ್ನು ಪ್ರಕಟಿಸಿದ್ದು, ಅದನ್ನು ರಾಜ್ಯದಾದ್ಯಂತ ಗುಟ್ಟಾಗಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಕೆಲವು ವ್ಯಕ್ತಿಗಳು ಮಾತಾಡುತ್ತಿರುವುದನ್ನು ಕೇಳಿಸಿಕೊಂಡೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 2021ರಲ್ಲಿ “The Gorakhpur Hospital Tragedy: A Doctor’s Memoir of a Deadly Medical Crisis” ಎಂಬ ಕೃತಿಯನ್ನು ಕಫೀಲ್ ಖಾನ್ ಅವರು ಪ್ರಕಟಿಸಿದ್ದರು. ಆ ಕೃತಿಯಲ್ಲಿ, 2017ರಲ್ಲಿ ಗೋರಖ್ ಪುರದಲ್ಲಿನ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಖಾಲಿಯಾಗಿ 63 ಮಕ್ಕಳು ಸಾವಿಗೀಡಾದ ಘಟನೆಗೆ ತಾವು ಸಾಕ್ಷಿಯಾದ ಅನುಭವವನ್ನು ಅವರು ಸ್ಮರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು, ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥರಾಗಿದ್ದರು.