ದಂಪತಿ ನಡುವೆ ಕಲಹ | ʼಕ್ರೈಂ ಸೀನ್ʼ ಮರುಸೃಷ್ಠಿಯ ವೇಳೆ ಪತಿ ಕೈಗೆ ಪಿಸ್ತೂಲ್ ಕೊಟ್ಟು ಅತೀ ಬುದ್ದಿವಂತಿಕೆ ಮೆರೆದ UP ಪೊಲೀಸರು!

PC : indiatoday.in
ಬುಲಂದ್ಶಹರ್ : ಉತ್ತರ ಪ್ರದೇಶದ ಬುಲಂದ್ ಶಹರ್ನ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು ದಂಪತಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಘಟನೆಯನ್ನು ಹೇಗೆ ವಿವರಿಸಬೇಕೆಂದು ಹೇಳುತ್ತಿರುವುದು, ಪತಿಯ ಬಂಧನಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಸಿದ್ಧಪಡಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ 4 ಕಾಡತೂಸುಗಳನ್ನೂ ಹಿಡಿದು ಆರೋಪಿತನಿಗೆ ತೋರಿಸಿದ್ದಾರೆ.
ಇನ್ಸ್ಪೆಕ್ಟರ್ ಸಹೋದ್ಯೋಗಿಗಳಿಗೆ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ನಿರ್ದೇಶಿಸುತ್ತಿರುವುದು ಕಂಡು ಬಂದ ನಂತರ ಪೊಲೀಸರು ಈ ಕುರಿತು ಅಧಿಕೃತ ತನಿಖೆಗೆ ಆದೇಶಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ ನಲ್ಲಿ ನವೆಂಬರ್ 3ರಂದು, ಪೂಜಾ ಸೋಲಂಕಿ ಎಂಬಾಕೆ ತನ್ನ ಪತಿ ಅಜಯ್ ಪದೇ ಪದೇ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪರಿಶೀಲಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಮಾಹಿತಿಯ ಪ್ರಕಾರ, ಅಧಿಕಾರಿಗಳು ಪತಿ-ಪತ್ನಿಯ ಮಾತನ್ನು ಆಲಿಸಿದರು. ಹೊಸ ಕಾನೂನಿನ ಪ್ರಕಾರ ಮುಂದೇನು ಮಾಡಬೇಕು ಎಂದು ಮೇಲಾಧಿಕಾರಿಗಳಿಂದ ಮಾಹಿತಿ ಪಡೆದರು.
ಬಂಧನಕ್ಕೆ ಮೊದಲು, ವೀಡಿಯೋ ದಾಖಲಾತಿ ಮಾಡಬೇಕೆಂಬ ಹೊಸ ನಿಯಮದಂತೆ, ದಂಪತಿಗೆ ಏನು ಹೇಳಬೇಕು ಎಂದು ಪೊಲೀಸರೇ ಸ್ಕ್ರಿಪ್ಟ್ ತಯಾರಿಸಿದರು. ವೀಡಿಯೋದಲ್ಲಿ ಪೊಲೀಸರು ದಂಪತಿಗೆ ಘಟನೆ ಬಗ್ಗೆ ಹೇಗೆ ವಿವರಿಸಬೇಕು ಎಂದು ಹೇಳುತ್ತಿರುವುದು ಮತ್ತು ಸಹೋದ್ಯೋಗಿಗಳಿಗೆ ಅದನ್ನು ಚಿತ್ರೀಕರಿಸುವಂತೆ ಸೂಚಿಸುತ್ತಿರುವುದು ಕಂಡು ಬಂದಿದೆ.
ಮರುದಿನ ಅಜಯ್ ಸೋಲಂಕಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ನವೆಂಬರ್ 7ರಂದು ಅವರನ್ನು ಬಿಡುಗಡೆ ಮಾಡಲಾಯಿತು.
ನವೆಂಬರ್ 22ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವೀಡಿಯೊ ವೈರಲ್ ಆಗಿದೆ. ಹೊಸ ಕಾನೂನುಗಳು ಮತ್ತು ಕಾರ್ಯವಿಧಾನಗಳನ್ನು ಪಾಲಿಸುವ ಬಗ್ಗೆ ಕೆಲವು ಅಧಿಕಾರಿಗಳ ಅನುಭವದ ಕೊರತೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.







