ನಿರ್ದಿಷ್ಟ ಆದೇಶ ಜಾರಿಗೆ ಸಿಜೆಎಂ ಮೇಲೆ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳಿಂದ ಒತ್ತಡ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ದೇಶ್ವಾಲ್

ಸಾಂದರ್ಭಿಕ ಚಿತ್ರ | Photo Credit ; PTI
ಲಕ್ನೋ, ಜ. 30: ನಿರ್ದಿಷ್ಟ ಆದೇಶಗಳನ್ನು ಜಾರಿಗೊಳಿಸುವಂತೆ ನ್ಯಾಯಾಧೀಶರ ಮೇಲೆ, ನಿರ್ದಿಷ್ಟವಾಗಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಸಿಜೆಎಂ) ಮೇಲೆ ಉತ್ತರಪ್ರದೇಶ ಪೊಲೀಸರು ನಿರಂತರ ಒತ್ತಡ ಹೇರುತ್ತಿದ್ದಾರೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ಅಭಿಪ್ರಾಯಿಸಿದೆ.
ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರ ಏಕಸದಸ್ಯ ಪೀಠ, ಉತ್ತರಪ್ರದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ರಾಜ್ಯದ ಪರವಾಗಿ ಹಾಜರಾದ ವಕೀಲರಿಗೆ ತಿಳಿಸಿದರು.
ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರ ವಿಚಾರಣೆ ಸಂದರ್ಭ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶದ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಹಾಗೂ ಅಂತಹ ಘಟನೆಯನ್ನು ಗುಂಡಿನ ಚಕಮಕಿ ಎಂದು ಬಿಂಬಿಸುವ ಪ್ರವೃತ್ತಿಯನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮವನ್ನು ವಿವರಿಸಲು ವೀಡಿಯೊ ಕಾನ್ಪರೆನ್ಸ್ ಮೂಲಕ ಹಾಜರಾಗಲು ಈ ಅಧಿಕಾರಿಗಳಿಗೆ ಸೂಚಿಸಿದ್ದರು.
ವಿಚಾರಣೆ ಸಂದರ್ಭ ಪೊಲೀಸ್ ಅಧಿಕಾರಿಗಳು, ಮುಖ್ಯವಾಗಿ ಸೇವೆಗೆ ಹೊಸದಾಗಿ ಸೇರ್ಪಡೆಯಾದ ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರ ಮೇಲೆ ಒತ್ತಡ ಹೇರುತ್ತಾರೆ. ಜಿಲ್ಲಾ ಮಟ್ಟದ ವಿಚಾರಣಾ ನ್ಯಾಯಾಲಯಗಳಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡ ಹೇರುವುದು ಹೆಚ್ಚಾಗಿ ಕಂಡು ಬರುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕೆಲವೊಮ್ಮೆ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಕೊಠಡಿಗೆ ಪ್ರವೇಶಿಸಿ ನ್ಯಾಯಾಧೀಶರಿಗೆ ಒತ್ತಡ ಹೇರುವ ಬಗ್ಗೆ ಬಾರ್ ಅಸೋಸಿಯೇಷನ್ಗಳ ಮುಖ್ಯಸ್ಥರಿಂದ ಮಾಹಿತಿ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.







