ಉತ್ತರ ಪ್ರದೇಶ | ಪ್ರಧಾನಿ ಮೋದಿ ಕುರಿತು ಆಕ್ಷೇಪಾರ್ಹ ಪೋಸ್ಟ್ ಆರೋಪ : ಮೂವರ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೋ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ತಿರುಚಿದ ಮತ್ತು ಆಕೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಸೋನಭದ್ರಾದಲ್ಲಿ ಮೂವರನ್ನು ಪೋಲಿಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಅನ್ಪಾರಾ ನಿವಾಸಿಗಳಾದ ಶಬ್ಬೀರ್ ಅನ್ಸಾರಿ, ಝಬೈರ್ ಅನ್ಸಾರಿ ಮತ್ತು ಇಝಾರ್ ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಅನ್ಪಾರಾ ಬಝಾರ್ ನಿವಾಸಿ ಬಾಲಗೋಪಾಲ ಚೌರಾಸಿಯಾ ಶನಿವಾರ ಪೋಲಿಸರಿಗೆ ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ, ಆರೋಪಿಗಳು ಪಾಕಿಸ್ತಾನಿ ಯೂಟ್ಯೂಬರ್ ಓರ್ವನ ಫೇಸ್ಬುಕ್ ಕಂಟೆಂಟ್ ಬಳಸಿ ಪ್ರಧಾನಿ ಮೋದಿಯವರನ್ನು ತಪ್ಪಾಗಿ ಬಿಂಬಿಸುವ ತಿರುಚಿದ ಪೋಸ್ಟ್ಗಳನ್ನು ಸೃಷ್ಟಿಸಿದ್ದರು ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಪೋಸ್ಟ್ಗಳು ದೇಶ ವಿರೋಧಿ ಎನ್ನುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಗಳು ಶತ್ರುದೇಶಗಳೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವ ಸಾಧ್ಯತೆಯಿದೆ. ದೂರು ಮತ್ತು ಸಂಗ್ರಹಿತ ಪುರಾವೆಗಳ ಆಧಾರದಲ್ಲಿ ಬಿಎನ್ಎಸ್ ಸಂಬಂಧಿತ ಕಲಂಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.





