ಯುಪಿಎ ಒಂದು ದಶಕ ವ್ಯರ್ಥ ಮಾಡಿತು, ಪ್ರತಿ ಬಿಕ್ಕಟ್ಟು ಈಗ ಸುಧಾರಣೆಯಾಗಿ ಬದಲಾಗಿದೆ: ನಿರ್ಮಲಾ ಸೀತಾರಾಮನ್

Photo: PTI
ಹೊಸದಿಲ್ಲಿ: ಈ ಹಿಂದೆ ವಿರೋಧ ಪಕ್ಷದ ಒಕ್ಕೂಟವಾಗಿರುವ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಗೆ (ಯುಪಿಎ)ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ನಾವು ಆರು ದಶಕಗಳಿಂದ "ಗರೀಬಿ ಹಠಾವೋ" ಅನ್ನು ಕೇಳುತ್ತಿದ್ದೇವೆ. ಆದರೆ ಏನಾದರೂ ಬದಲಾವಣೆಯಾಗಿದೆಯೇ?. ಈ ಸರಕಾರ ನಿಜವಾಗಿಯೂ ಆ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸರಕಾರದ ಅಡಿಯಲ್ಲಿ "ಪರಿವರ್ತನೆ" ಆಗಿದೆ ಎಂದು ಎನ್ ಡಿಎ ಸರಕಾರವನ್ನು ನಿರ್ಮಲಾ ಸಮರ್ಥಿಸಿಕೊಂಡರು.
'ಯುಪಿಎ' ಹೆಸರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ. ಇದು ಜನರಿಗೆ ಭ್ರಷ್ಟಾಚಾರ ಮತ್ತು ಕುತಂತ್ರವನ್ನು ನೆನಪಿಸುತ್ತದೆ. ಅದಕ್ಕಾಗಿಯೇ ವಿರೋಧ ಪಕ್ಷವು INDIA ಒಕ್ಕೂಟದ ಮೊರೆ ಹೋಗಲು ನಿರ್ಧರಿಸಿದವು. ಯುಪಿಎ ಇಡೀ ದಶಕವನ್ನು ವ್ಯರ್ಥ ಮಾಡಿದೆ. ಆದರೆ ಪ್ರತಿ ಬಿಕ್ಕಟ್ಟು ಈಗ ಸುಧಾರಣೆಯಾಗಿ ಬದಲಾಗಿದೆ. NDA ಅಡಿಯಲ್ಲಿ, ನಾವು ಹೆಚ್ಚಿನ ಬೆಳವಣಿಗೆ ಹಾಗೂ ಕಡಿಮೆ ಹಣದುಬ್ಬರವನ್ನು ಕಂಡಿದ್ದೇವೆ' ಎಂದು ವಿತ್ತ ಸಚಿವೆ ಹೇಳಿದರು.
ಸಾರ್ವಜನಿಕ ವಲಯದ ಬ್ಯಾಂಕ್ ಗಳು 1 ಲಕ್ಷ ಕೋಟಿ ರೂ. ಗೂ ಅಧಿಕ ಲಾಭ ದಾಖಲಿಸಿವೆ. ಕಾಂಗ್ರೆಸ್ ರಾಜಕೀಯ ವಂಶಾಡಳಿತವು ಸೋರಿಕೆಗಳು ಹಾಗೂ ದೊಡ್ಡ ಹಗರಣಗಳಿಂದ ಲಾಭ ಪಡೆಯುತ್ತಿತ್ತು. ಆದರೆ ಎನ್ ಡಿಎ ಇದಕ್ಕೆ ಅಂತ್ಯ ಹಾಡಿದೆ. ಸೋರಿಕೆ ತಡೆದ ಕಾರಣ 2.76 ಲಕ್ಷ ಕೋಟಿ ರೂ. ಲಾಭ ದಾಖಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.







