ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿ 5 ಲಕ್ಷ ರೂ.ಗಳಿಗೆ ಹೆಚ್ಚಳ: ರಿಸರ್ವ್ ಬ್ಯಾಂಕ್
ಶಕ್ತಿಕಾಂತ್ ದಾಸ್ | Photo: PTI
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ)ಯ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಸೇರಿದಂತೆ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಕುರಿತು ಹಲವು ನಿರ್ಧಾರಗಳನ್ನು ಶುಕ್ರವಾರ ಘೋಷಿಸಿದ್ದಾರೆ.
ಎರಡು ತಿಂಗಳ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ಸಂದರ್ಭ ದಾಸ್ ಅವರು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿಯ ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದನ್ನು ಘೋಷಿಸಿದರು.
ಪರಿಷ್ಕೃತ ಮಿತಿಯು ಶಿಕ್ಷಣ ಹಾಗೂ ಆರೋಗ್ಯ ಸೇವೆ ಉದ್ದೇಶಗಳಿಗೆ ಅತಿ ಹೆಚ್ಚು ಮೊತ್ತವನ್ನು ಯುಪಿಐ ಮೂಲಕ ಪಾವತಿ ಮಾಡುವ ಜನರಿಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಮರುಕಳಿಸುವ ಅಥವಾ ಪುನರಾವರ್ತಿತ ಸ್ವರೂಪದ ಪಾವತಿ (ರಿಕರಿಂಗ್ ಪಾವತಿ) ಮಾಡುವ ಇ-ಮ್ಯಾಂಡೇಟ್ಗಳ ಮಿತಿಯನ್ನು 15 ಸಾವಿರ ರೂ.ನಿಂದ 1 ಲಕ್ಷ ರೂ. ವರೆಗೆ ಏರಿಸಲು ಪ್ರಸ್ತಾವಿಸಿದೆ.
ಸದ್ಯದ ರಿಕರಿಂಗ್ ಪಾವತಿಯು ಮ್ಯೂಚುವಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳಿಗೆ ಅನ್ವಯಿಸಲಿದ್ದು, ಆನಂತರ ಉಳಿದ ಸೇವೆಗಳಿಗೂ ವಿಸ್ತರಿಸಲಾಗುವುದು ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ರೆಪೋ ದರವನ್ನು ಸತತ ಐದನೇ ಬಾರಿ ಬದಲಾಯಿಸದೇ ಇರಿಸಲು ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧರಿಸಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.