ರಾಜ್ಯಸಭೆಯಲ್ಲಿ ಖರ್ಗೆ ಕುರಿತ ನಡ್ಡಾ ಹೇಳಿಕೆಗೆ ಗದ್ದಲ: ಕ್ಷಮೆ ಯಾಚಿಸಿದ ಆರೋಗ್ಯ ಸಚಿವ
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತ ಚರ್ಚೆ

ಜೆ.ಪಿ.ನಡ್ಡಾ , ಮಲ್ಲಿಕಾರ್ಜುನ ಖರ್ಗೆ | PTI
ಹೊಸದಿಲ್ಲಿ: ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ರಾಜ್ಯಸಭೆಯಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆಯ ವೇಳೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕುರಿತು ಸಭಾಪತಿ ಜೆ.ಪಿ.ನಡ್ಡಾ ನೀಡಿದ ಹೇಳಿಕೆಯಿಂದಾಗಿ ಸದನದಲ್ಲಿ ಗದ್ದಲವೆದ್ದ ಘಟನೆ ನಡೆಯಿತು.
ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ರಾಜ್ಯಸಭಾ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸುದೀರ್ಘ ಒಂದು ಗಂಟೆಯ ಕಾಲ ತೀಕ್ಷ್ಣ ಟೀಕಾಪ್ರಹಾರ ನಡೆಸಿದ ನಂತರ, ಸದನದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಖರ್ಗೆ ಅವರ ಟೀಕಾಪ್ರಹಾರಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಸಭಾಪತಿ ಸ್ಥಾನದಲ್ಲಿದ್ದ ಜೆ.ಪಿ.ನಡ್ಡಾ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿ ಟೀಕಾಪ್ರಹಾರ ನಡೆಸಿದರು. ಅವರ ಈ ಹೇಳಿಕೆ ಸದನದಲ್ಲಿ ಆಡಳಿತಾರೂಢ ಪಕ್ಷದ ಸದಸ್ಯರು ಹಾಗೂ ವಿಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.
ಜೆ.ಪಿ.ನಡ್ಡಾರ ಈ ವ್ಯಂಗ್ಯವನ್ನು ತಕ್ಷಣವೇ ಖಂಡಿಸಿದ ಮಲ್ಲಿಕಾರ್ಜುನ ಖರ್ಗೆ, ಇದು ನಾಚಿಕೆಗೇಡಿನ ವರ್ತನೆಯಾಗಿದ್ದು, ಈ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. “ಸದನದಲ್ಲಿ ರಾಜನಾಥ್ ಸಿಂಗ್ ಹಾಗೂ ಜೆ.ಪಿ.ನಡ್ಡಾ ಸೇರಿದಂತೆ ಕೆಲವು ಸಚಿವರಿದ್ದು, ಅವರು ತಮ್ಮ ಸಮತೋಲನವನ್ನು ಕಳೆದುಕೊಳ್ಳದೆ ವಿಷಯಗಳನ್ನು ಮಂಡಿಸುವುದರಿಂದ, ನನಗೆ ಅವರ ಬಗ್ಗೆ ಅಪಾರವಾದ ಗೌರವವಿದೆ” ಎಂದೂ ಅವರು ಹೇಳಿದರು.
“ಆದರೆ, ಅವರೇನಾದರೂ ಕ್ಷಮೆ ಯಾಚಿಸದಿದ್ದರೆ, ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅವರು ಕಿಡಿ ಕಾರಿದರು. ಆರಂಭದಲ್ಲಿ ಕ್ಷಮೆಯಾಚಿಸಲು ನಡ್ಡಾ ಹಿಂಜರಿದರಾದರೂ, ನಂತರ, ಅವರು ತಮ್ಮ ಮಾತುಗಳಿಗಾಗಿ ಕ್ಷಮೆ ಯಾಚಿಸಿದರು.
“ನಾನು ಈಗಾಗಲೇ ನನ್ನ ಮಾತುಗಳನ್ನು ಹಿಂಪಡೆದಿದ್ದೇನೆ. ಒಂದು ವೇಳೆ ಆ ಮಾತುಗಳೇನಾದರೂ ಖರ್ಗೆ ಅವರಿಗೆ ಘಾಸಿಯನ್ನುಂಟು ಮಾಡಿದ್ದರೆ, ನಾನು ಅದಕ್ಕಾಗಿ ಅವರ ಕ್ಷಮೆ ಯಾಚಿಸುತ್ತೇನೆ. ಆದರೆ, ಖರ್ಗೆ ಕೂಡಾ ತಮ್ಮ ಮಿತಿಯನ್ನು ಮೀರಿದ್ದು, ಉದ್ವೇಗ ಹಾಗೂ ಉತ್ಸಾಹದಿಂದ ಪ್ರಧಾನಿಗಳ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಅವನ್ನು ಕಡತದಿಂದ ತೆಗೆದು ಹಾಕಬೇಕು” ಎಂದೂ ಜೆ.ಪಿ.ನಡ್ಡಾ ಆಗ್ರಹಿಸಿದರು.







