ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್ ದಾಖಲು

ಅಮಿತ್ ಶಾ , ಮಹುವಾ ಮೊಯಿತ್ರಾ | PTI
ರಾಯ್ಪುರ (ಛತ್ತೀಸ್ ಗಢ): ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಛತ್ತೀಸ್ ಗಢ ರಾಜಧಾನಿ ರಾಯ್ಪುರದಲ್ಲಿ ಎಫ್ಐಆರ್ ದಾಖಲಾಗಿದೆ.
ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಹುವಾ ಮೊಯಿತ್ರಾ, “ಒಂದು ವೇಳೆ ಅಮಿತ್ ಶಾ ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲಿಡುವುದು” ಎಂದು ಹೇಳಿದ್ದರು. ಇದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.
ಈ ಸಂಬಂಧ, ಸ್ಥಳೀಯ ನಿವಾಸಿ ಗೋಪಾಲ್ ಸಮಂತೊ ಎಂಬುವವರು ಶನಿವಾರ ನೀಡಿರುವ ದೂರನ್ನು ಆಧರಿಸಿ, ಮನ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹುವಾ ಮೊಯಿತ್ರಾರ ಹೇಳಿಕೆ ಅಸಾಂವಿಧಾನಿಕ ಹಾಗೂ ಆಕ್ಷೇಪಾರ್ಹವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರಿ ಪ್ರಮಾಣದ ಬಾಂಗ್ಲಾದೇಶಿ ನಿರ್ವಸತಿಗರು 1971ರಿಂದ ರಾಯ್ಪುರದ ಮನ ಶಿಬಿರದಲ್ಲಿ ನೆಲೆಸಿದ್ದಾರೆ. ಮಹುವಾ ಮೊಯಿತ್ರಾರ ಹೇಳಿಕೆಯಿಂದ ಅವರಲ್ಲಿ ಭೀತಿ ಸೃಷ್ಟಿಯಾಗಿದ್ದು, ಇತರ ಸಮುದಾಯಗಳಲ್ಲಿ ಆಕ್ರೋಶವನ್ನು ಉದ್ರೇಕಿಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರಕಾರವು ಗಡಿ ರಕ್ಷಣೆಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದೂ ಮಹುವಾ ಮೊಯಿತ್ರಾ ಆರೋಪಿಸಿದ್ದರು.
ಮಹುವಾ ಮೊಯಿತ್ರಾ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಮಹುವಾ ಮೊಯಿತ್ರಾರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿಯ ನಾಯಕ ಹಾಗೂ ಲೋಕಸಭಾ ಸಂಸದ ರವಿಶಂಕರ್ ಪ್ರಸಾದ್, “ಆಕೆಯ ಹೇಳಿಕೆ ಖಂಡನಾರ್ಹವಾಗಿದೆ. ಒಂದು ಬಾರಿ ಆಕೆಯ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. ಈಗ ಮತ್ತೆ ಅದನ್ನು ಪುನರಾವರ್ತಿಸಲು ಆಕೆ ಬಯಸಿದ್ದಾರೆಯೆ? ದೇಶದ ಗೃಹ ಸಚಿವರ ವಿರುದ್ಧ ಇಂತಹ ಹೇಳಿಕೆ ನೀಡಿರುವವರಿಗೆ ಯಾವ ಅರ್ಹತೆಯಿದೆ? ಮಮತಾ ಬ್ಯಾನರ್ಜಿ ಎಂತಹ ವ್ಯಕ್ತಿಗಳನ್ನು ಹೊಂದಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಮಹುವಾ ಮೊಯಿತ್ರಾರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದು, “ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ವಿರುದ್ಧ ಟಿಎಂಸಿ ಸಂಸದೆ ನೀಡಿರುವ ಅಸಂಸದೀಯ ಹಾಗೂ ಆಕ್ಷೇಪಾರ್ಹ ಹೇಳಿಕೆ ಕ್ಷಮೆಯಿಲ್ಲದ, ತೀವ್ರ ಖಂಡನಾರ್ಹ ಹೇಳಿಕೆಯಾಗಿದೆ” ಎಂದು ಟೀಕಿಸಿದ್ದಾರೆ.
ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಮಹುವಾ ಮೊಯಿತ್ರಾ ವಿರುದ್ಧ ಎಕ್ಸ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ನಂತರ, ಈ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ. ಸದ್ಯ ಈ ಪೋಸ್ಟ್ ಅನ್ನು ಅಳಿಸಿ ಹಾಕಲಾಗಿದೆ.
ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಟಿಎಂಸಿ, “ಮಹಿಳಾ ಸಂಸದೆಯೊಬ್ಬರ ವಿರುದ್ಧ ರಮೇಶ್ ಬಿಧೂರಿ ನೀಡಿರುವ ಹೇಳಿಕೆ ಅಸಹಜವಲ್ಲ; ಬದಲಿಗೆ ಅದು ಬಿಜೆಪಿಯ ರಾಜಕೀಯ ಪರಿಭಾಷೆ. ಮೋದಿ-ಶಾ ನಾಯಕತ್ವದಲ್ಲಿ ಸ್ತ್ರೀದ್ವೇಷ, ದ್ವೇಷ ಹಾಗೂ ಹೊಲಸು ನಿಂದನೆ ಸಹಜವಾಗಿ ಹೋಗಿದೆ” ಎಂದು ಕಿಡಿ ಕಾರಿದೆ.
ಈ ನಡುವೆ, ಮಹುವಾ ಮೊಯಿತ್ರಾರ ಹೇಳಿಕೆಯನ್ನು ಟಿಎಂಸಿ ಸಮರ್ಥಿಸಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಸಚಿವ ಸೊವೊನ್ ದೇಬ್ ಚಟ್ಟೋಪಾಧ್ಯಾಸಯ, “ಯಾವುದಾದರೂ ಸಮುದಾಯಕ್ಕೆ ಅಗೌರವ ತೋರಲು ಮಹುವಾ ಮೊಯಿತ್ರಾ ಮೂರ್ಖರಲ್ಲ. ಬಂಗಾಳಿಗಳಿಗೆ ಅಗೌರವ ತೋರುತ್ತಿರುವುದು ಬಿಜೆಪಿಯವರಾಗಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿಯ ವಿರುದ್ಧ ಮಹುವಾ ಮೊಯಿತ್ರಾ ಅತಿ ಮುಖ್ಯ ಧ್ವನಿಯಾಗಿರುವುದರಿಂದ, ಬಿಜೆಪಿ ಅವರನ್ನು ಗುರಿಯಾಗಿಸಿಕೊಂಡಿದೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಟಿಎಂಸಿಯ ಹಿರಿಯ ನಾಯಕ ಹಾಗೂ ಸಚಿವ ಶಶಿ ಪಂಜಾ ಕೂಡಾ ಮಹುವಾ ಮೊಯಿತ್ರಾ ವಿರುದ್ಧದ ರಮೇಶ್ ಬಿಧೂರಿಯ ಅವಹೇಳನಕಾರಿ ಪೋಸ್ಟ್ ಅನ್ನು ಬಲವಾಗಿ ಆಕ್ಷೇಪಿಸಿದ್ದಾರೆ.
“ಬಿಜೆಪಿಗೆ ಮಹಿಳೆಯರನ್ನು ಅವಮಾನಿಸುವ ಇತಿಹಾಸವೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ’ ಎಂದು ವ್ಯಂಗ್ಯವಾಡುವ ಮೂಲಕ ಅವರನ್ನು ಅವಮಾನಿಸಿದ್ದರು. ಆದರೆ, ಬಂಗಾಳದ ಜನತೆ ಅದಕ್ಕೆ ಪ್ರಬಲವಾದ ಉತ್ತರ ನೀಡಿದರು ಹಾಗೂ ಬಿಜೆಪಿ ಪರಾಭವವನ್ನು ಅನುಭವಿಸಬೇಕಾಯಿತು” ಎಂದು ಅವರು ನೆನಪಿಸಿದ್ದಾರೆ.







