ದಿಲ್ಲಿ: ಯುಪಿಎಸ್ಸಿ ಆಕಾಂಕ್ಷಿ ಆತ್ಮಹತ್ಯೆ

ಹೊಸದಿಲ್ಲಿ, ಜು. 20: ಇಪ್ಪತ್ತೈದು ವರ್ಷದ ಯುಪಿಎಸ್ಸಿ ಆಕಾಂಕ್ಷಿ ಕೇಂದ್ರ ದಿಲ್ಲಿಯ ಹಳೆ ರಾಜಿಂದರ್ ನಗರ್ ಪ್ರದೇಶದಲ್ಲಿರುವ ತನ್ನ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುಪಿಎಸ್ಸಿ ಆಕಾಂಕ್ಷಿಯನ್ನು ತರುಣ್ ಠಾಕೂರ್ ಎಂದು ಗುರುತಿಸಲಾಗಿದೆ.
ಆತನ ಕೊಠಡಿಯಲ್ಲಿ ಸುಸೈಡ್ ನೋಟ್ ಕೂಡ ಪತ್ತೆಯಾಗಿದೆ. ಸುಸೈಡ್ ನೋಟ್ ನಲ್ಲಿ ಆತ ತನ್ನ ಸಾವಿಗೆ ತಾನೇ ಕಾರಣ ಎಂದು ಹೇಳಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆತ್ಮಹತ್ಯೆ ಕುರಿತ ಪಿಸಿಆರ್ ಕರೆಯನ್ನು ರಾಜಿಂದರ್ ನಗರ್ ಪೊಲೀಸ್ ಠಾಣೆ ಶನಿವಾರ ಸಂಜೆ ಸುಮಾರು 6.32ಕ್ಕೆ ಸ್ವೀಕರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿತು. ಅಲ್ಲಿನ ಬಾಡಿಗೆ ಕೊಠಡಿಯಲ್ಲಿ ತರುಣ್ ಠಾಕೂರ್ನ ಮೃತದೇಹ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿರುವುದು ಪತ್ತೆಯಾಯಿತು. ತರುಣ್ ಜಮ್ಮುವಿನ ನಿವಾಸಿ. ಆತ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ತರುಣ್ ಠಾಕೂರ್ ಅವರ ತಂದೆ ಆತನನ್ನು ಸಂಪರ್ಕಿಸಲು ಬೆಳಗ್ಗಿನಿಂದ ಪ್ರಯತ್ನಿಸುತ್ತಿದ್ದರು. ಆದರೆ, ಅವರಿಗೆ ಯಾವುದೇ ಪ್ರತಿಕ್ರಿಯೆ ದೊರಕಿರಲಲ್ಲಿ. ಅನಂತರ ಅವರು ತರುಣ್ ಠಾಕೂರ್ ನ ಕೊಠಡಿಯ ಮಾಲಕನನ್ನು ಸಂಪರ್ಕಿಸಿದರು. ಅವರು ಕೊಠಡಿಯಲ್ಲಿ ಪರಿಶೀಲಿಸಿದಾಗ ತರುಣ್ ಠಾಕೂರ್ ಮೃತದೇಹ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂತು. ಅನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.







