ಉತ್ತರ ಪ್ರದೇಶ: ಸಿಎಎ ವಿರೋಧಿ ಆಂದೋಲನ ಬೆಂಬಲಿಸಿದ್ದ ಉರ್ದು ಕವಯಿತ್ರಿ ಬಿಜೆಪಿ ಪ್ರತಿಭಟನೆ ಬಳಿಕ ಮುಷಾಯಿರಾ ಆಹ್ವಾನಿತರ ಪಟ್ಟಿಯಿಂದ ಹೊರಕ್ಕೆ

Photo : timesofindia
ಮೀರತ್: ಸ್ಥಳೀಯ ಬಿಜೆಪಿ ಘಟಕದಿಂದ ತೀವ್ರ ಪ್ರತಿಭಟನೆಯ ಬಳಿಕ ಮೀರತ್ ಜಿಲ್ಲಾಡಳಿತವು ‘ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ’ಗಳನ್ನು ಉಲ್ಲೇಖಿಸಿ ಆಹ್ವಾನಿತರ ಪಟ್ಟಿಯಿಂದ ಪ್ರಶಸ್ತಿ ವಿಜೇತ ಉರ್ದು ಕವಯಿತ್ರಿ ಶಬೀನಾ ಅದೀಬ್ ಅವರ ಹೆಸರನ್ನು ಕೈಬಿಡುವಂತೆ ಪ್ರಸಿದ್ಧ ‘ಅಖಿಲ ಭಾರತ ಮುಷಾಯಿರಾ’ದ ಸಂಘಟಕರಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಅದೀಬ್ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದರು ಎಂದು ಮೀರತ್ನ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ದಿಲ್ಲಿಯ ಶಹೀನ್ ಬಾಗ್ನಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯನ್ನು ಅದೀಬ್ ಬೆಂಬಲಿಸಿದ್ದು ಕೂಡ ಈ ಕಾರ್ಯಕರ್ತರಿಗೆ ಪಥ್ಯವಾಗಿರಲಿಲ್ಲ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಜೈನ್ ರಿತುರಾಜ್ ಅವರು, ‘ಅದೀಬ್ ಅವರ ವಿವಾದಾತ್ಮಕ ವೀಡಿಯೊವೊಂದು ಮುನ್ನೆಲೆಗೆ ಬಂದಿದ್ದು, ಅವರು ಮೀರತ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯಾಗಬಹುದು ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ನಾವು ಜಿಲ್ಲಾಡಳಿತದೊಂದಿಗೆ ಮಾತನಾಡಿ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯನ್ನು ತಡೆದಿದ್ದೇವೆ’ ಎಂದು ತಿಳಿಸಿದರು.
‘ವ್ಯಕ್ತಿಯ ಉಪಸ್ಥಿತಿಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯು ಉದ್ಭವಿಸುತ್ತದೆ ಎಂದಾದರೆ ನಾವು ಆ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ’ ಎಂದು ಮೀರತ್ನ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ನೂಪುರ ಗೋಯೆಲ್ ಹೇಳಿದರು.
15 ವರ್ಷಗಳ ಹಿಂದೆ ಮುಷಾಯಿರಾದಲ್ಲಿ ಅದೀಬ್ ಪ್ರಸ್ತುತ ಪಡಿಸಿದ್ದ ಕೆಲವು ಕವನಗಳು ಬಹುಶಃ ಅವರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿರಬಹುದು.ಕವಿಗಳು ಏನನ್ನಾದರೂ ಬರೆಯುವಾಗ ತಾವು ಬಳಸುವ ಪದಗಳು ಉಂಟು ಮಾಡುವ ಪರಿಣಾಮದ ಬಗ್ಗೆ ಎಂದೂ ಯೋಚಿಸುವುದಿಲ್ಲ. ಕವಿಯೋರ್ವರು ಸಾಮಾಜಿಕ ಕಳಕಳಿಯ ಕವನಗಳನ್ನು ಹಾಡಿದ್ದು ಇದೇ ಮೊದಲ ಸಲವಲ್ಲ,ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಇಂತಹ ನಿದರ್ಶನಗಳಿವೆ. ತನಗೆ ಕೊಂಚ ಅನಾರೋಗ್ಯ ಕಾಡುತ್ತಿದೆ,ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅದೀಬ್ ತಿಳಿಸಿದ್ದಾರೆ ಎಂದು ಸಂಘಟನಾ ಸಮಿತಿಯ ಸದಸ್ಯ ಮೈರಾಜುದ್ದೀನ್ ಅಹ್ಮದ್ ತಿಳಿಸಿದರು.







