ಟ್ರಂಪ್ ಪ್ರಧಾನಿ ಮೋದಿ ಜೊತೆ ನಿಜವಾದ ಸ್ನೇಹ ಹೊಂದಿದ್ದಾರೆ: ಅಮೆರಿಕದ ರಾಯಭಾರಿ ಗೋರ್

ಡೊನಾಲ್ಡ್ ಟಂಪ್ , ನರೇಂದ್ರ ಮೋದಿ , ಸರ್ಗಿಯೊ ಗೋರ್ | Photo Credit : PTI
ಹೊಸದಿಲ್ಲಿ, ಜ.12: ಉಭಯ ದೇಶಗಳು ಬಲವಾದ ಸಂಬಂಧಗಳನ್ನು ಹೊಂದಿವೆ ಎಂದು ಸೋಮವಾರ ಇಲ್ಲಿ ಒತ್ತಿ ಹೇಳಿದ ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ ಸರ್ಗಿಯೊ ಗೋರ್ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಜವಾದ ಸ್ನೇಹವನ್ನು ಹೊಂದಿದ್ದಾರೆ ಮತ್ತು ಸಾಂದರ್ಭಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ದೃಢವಾದ ಬದ್ಧತೆಯನ್ನು ಹೊಂದಿವೆ ಎಂದು ಹೇಳಿದರು.
‘ನಾನು ಅಧ್ಯಕ್ಷ ಟ್ರಂಪ್ ಜೊತೆ ವಿಶ್ವಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ಅವರ ಸ್ನೇಹ ನೈಜವಾದುದು ಎಂದು ನಾನು ದೃಢೀಕರಿಸಬಲ್ಲೆ. ಅಮೆರಿಕ ಮತ್ತು ಭಾರತ ಪರಸ್ಪರ ಹಂಚಿಕೊಂಡಿರುವ ಹಿತಾಸಕ್ತಿಗಳಿಂದ ಮಾತ್ರವಲ್ಲ, ಉನ್ನತ ಮಟ್ಟಗಳಲ್ಲಿ ಬೇರೂರಿರುವ ಬಲವಾದ ಸಂಬಂಧದಿಂದಲೂ ಪರಸ್ಪರ ಬದ್ಧತೆಯನ್ನು ಹೊಂದಿವೆ’ ಎಂದು ಹೇಳಿದ ಗೋರ್, ನಿಜವಾದ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳು ಸಹಜ, ಆದರೆ ಅಂತಿಮವಾಗಿ ಅವುಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದರು.
ಸುಂಕಗಳು ಮತ್ತು ಪ್ರಸ್ತಾವಿತ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ನಡೆಯುತ್ತಿರುವ ಮಾತುಕತೆಗಳ ನಡುವೆ ಗೋರ್ ಹೇಳಿಕೆಗಳು ಹೊರಬಿದ್ದಿವೆ.
ಮೋದಿ ಜೊತೆ ಟ್ರಂಪ್ ಅವರ ಇತ್ತೀಚಿನ ಸಂವಹನಗಳನ್ನು ನೆನಪಿಸಿಕೊಂಡ ಗೋರ್, ಅಮೆರಿಕದ ಅಧ್ಯಕ್ಷರು ಭಾರತಕ್ಕೆ ತನ್ನ ಭೇಟಿ ಮತ್ತು ಮೋದಿ ಅವರೊಂದಿಗಿನ ವೈಯಕ್ತಿಕ ಸಂಬಂಧದ ಬಗ್ಗೆ ಆಗಾಗ್ಗೆ ಮಾತನಾಡಿದ್ದಾರೆ ಎಂದರು.
‘ಟ್ರಂಪ್ ಜೊತೆ ನನ್ನ ಹಿಂದಿನ ಭೋಜನದ ವೇಳೆ ಅವರು ಭಾರತಕ್ಕೆ ತನ್ನ ಕೊನೆಯ ಭೇಟಿ ಮತ್ತು ಭಾರತದ ಮಹಾನ್ ಪ್ರಧಾನಿಯೊಂದಿಗೆ ತನ್ನ ಉತ್ತಮ ಸ್ನೇಹವನ್ನು ಮೆಲುಕು ಹಾಕಿದ್ದರು. ಅಧ್ಯಕ್ಷರು ಶೀಘ್ರ, ಬಹುಶಃ ಒಂದೆರಡು ವರ್ಷಗಳಲ್ಲಿ ನಮ್ಮನ್ನು ಭೇಟಿಯಾಗುತ್ತಾರೆ ಎಂದು ನಾನು ಆಶಿಸಿದ್ದೇನೆ. ಟ್ರಂಪ್ ಬೆಳಿಗ್ಗೆ ಎರಡು ಗಂಟೆಗೆ ಕರೆ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಉಭಯ ದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದಾಗಿ ಅದು ಉಪಯುಕ್ತವಾಗಬಹುದು’ ಎಂದರು.
‘ಅಮೆರಿಕಕ್ಕೆ ಭಾರತಕ್ಕಿಂತ ಹೆಚ್ಚು ಮುಖ್ಯವಾದ ಪಾಲುದಾರ ದೇಶ ಬೇರೊಂದಿಲ್ಲ. ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಅನುಸರಿಸುವುದು ರಾಯಭಾರಿಯಾಗಿ ನನ್ನ ಗುರಿಯಾಗಿದೆ’ ಎಂದು ಗೋರ್ ಹೇಳಿದರು.
ವ್ಯಾಪಾರ ಒಪ್ಪಂದ ಮಾತುಕತೆಗಳ ಕುರಿತು ಮಾತನಾಡಿದ ಗೋರ್, ಭಾರತವು ವಿಶ್ವದ ಅತ್ಯಂತ ದೊಡ್ಡ ದೇಶವಾಗಿರುವುದರಿಂದ ವ್ಯಾಪಾರ ಒಪ್ಪಂದ ಅಷ್ಟೊಂದು ಸುಲಭದ ಕೆಲಸವಲ್ಲ, ಆದರೆ ಅದನ್ನು ಅಂತಿಮಗೊಳಿಸುವ ದೃಢಸಂಕಲ್ಪವನ್ನು ಉಭಯ ದೇಶಗಳು ಹೊಂದಿವೆ ಎಂದರು. ಎರಡೂ ದೇಶಗಳು ಮಾತುಕತೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಮಂಗಳವಾರವೇ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಭಾರತ–ಅಮೆರಿಕ ಸಂಬಂಧಕ್ಕೆ ವ್ಯಾಪಾರ ಅತ್ಯಂತ ಮುಖ್ಯವಾಗಿದ್ದರೂ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯದಂತಹ ಇತರ ಪ್ರಮುಖ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಗೋರ್ ಹೇಳಿದರು.
ಗೋರ್ ಸೋಮವಾರ ಇಲ್ಲಿನ ಅಮೆರಿಕ ರಾಯಭಾರ ಕಚೇರಿಯ ಆವರಣದಲ್ಲಿ ಭಾರತಕ್ಕೆ ಅಮೆರಿಕದ ನೂತನ ನಿಯೋಜಿತ ರಾಯಭಾರಿಯಾಗಿ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಗೋರ್ ಈ ವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ಅಧಿಕಾರಪತ್ರಗಳನ್ನು ಸಲ್ಲಿಸಲಿದ್ದಾರೆ.







