ಇರಾನ್ ಮೇಲೆ ಅಮೆರಿಕ ದಾಳಿ; ಟ್ರಂಪ್ ನಿರ್ಧಾರಕ್ಕೆ ಕಾಂಗ್ರೆಸ್ ಖಂಡನೆ

ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಇರಾನ್ನ ಪರಮಾಣು ನೆಲೆಗಳ ಮೇಲೆ ವಾಯು ದಾಳಿ ನಡೆಸುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರವನ್ನು ಕಾಂಗ್ರೆಸ್ ಸೋಮವಾರ ಕಟುವಾಗಿ ಟೀಕಿಸಿದೆ.
ಇದು ಇರಾನ್ನೊಂದಿಗೆ ನಿರಂತರ ಮಾತುಕತೆಗೆ ಬೆಂಬಲಿಸುವ ತನ್ನ ಸ್ವಂತ ಹೇಳಿಕೆಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ. ಅಮೆರಿಕ ನಡೆಸಿದ ಬಾಂಬ್ ದಾಳಿ ಹಾಗೂ ಇಸ್ರೇಲ್ನ ಕ್ರಮಗಳ ವಿರುದ್ಧ ಪ್ರತಿಕ್ರಿಯಿಸದ ಕೇಂದ್ರ ಸರಕಾರವನ್ನು ಕೂಡ ಕಾಂಗ್ರೆಸ್ ಟೀಕಿಸಿದೆ.
‘‘ಇರಾನ್ ಮೇಲೆ ಅಮೆರಿಕದ ವಾಯು ಬಲವನ್ನು ಪ್ರಯೋಗಿಸುವ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರ ಇರಾನ್ನೊಂದಿಗೆ ಮಾತುಕತೆ ಮುಂದುವರಿಸಬೇಕೆಂಬ ಅವರ ಸ್ವಂತ ಕರೆಯನ್ನು ಅಣಕಿಸುತ್ತದೆ’’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇರಾನ್ ಜೊತೆ ತತ್ಕ್ಷಣದ ರಾಜತಾಂತ್ರಿಕತೆ ಹಾಗೂ ಮಾತುಕತೆಯ ಸಂಪೂರ್ಣ ಅಗತ್ಯತೆಯನ್ನು ಕಾಂಗ್ರೆಸ್ ಮರು ಉಚ್ಚರಿಸುತ್ತದೆ. ಭಾರತ ಸರಕಾರ ಇಲ್ಲಿವರೆಗೆ ತೋರಿಸಿರುವುದಕ್ಕಿಂತ ಹೆಚ್ಚಿನ ನೈತಿಕ ಧೈರ್ಯವನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದ್ದಾರೆ.
ಅಮೆರಿಕ ಬಾಂಬ್ ದಾಳಿ ನಡೆಸಿರುವುದು ಹಾಗೂ ಇಸ್ರೇಲ್ನ ಆಕ್ರಮಣಶೀಲತೆ, ಬಾಂಬ್ ದಾಳಿ ನಡೆಸಿರುವುದು, ನಿರ್ದಿಷ್ಟ ವ್ಯಕ್ತಿಗಳ ಗುರಿಯಿರಿಸಿ ಹತೈಗೈದಿರುವುದನ್ನು ಮೋದಿ ಸರಕಾರ ಟೀಕಿಸಲೂ ಇಲ್ಲ, ಖಂಡಿಸಲೂ ಇಲ್ಲ ಎಂದು ಅವರು ಹೇಳಿದ್ದಾರೆ.
ಗಾಝಾದಲ್ಲಿ ಪೆಲೆಸ್ತೀನಿಯರ ನರಮೇಧದ ಕುರಿತು ಮೋದಿ ಸರಕಾರ ಮೌನವಾಗಿದೆ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.







