ಒಬಾಮ ಆಡಳಿತದ ವೇಳೆ ಅಮೆರಿಕಾ 6 ಮುಸ್ಲಿಂ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು: ನಿರ್ಮಲಾ ಸೀತಾರಾಮನ್
Photo: PTI
ಹೊಸದಿಲ್ಲಿ: ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ವಿರುದ್ಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ. ಒಬಾಮ ಅವರು ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಅವರ ದೇಶವು ಆರು ಮುಸ್ಲಿಂ ಬಾಹುಳ್ಯದ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು ಎಂದು ಸೀತಾರಾಮನ್ ನೆನಪಿಸಿದ್ದಾರೆ.
“ಅಮೆರಿಕಾದ ಅಧ್ಯಕ್ಷರು ಭಾರತದ ಪ್ರಧಾನಿಯನ್ನು ಭೇಟಿಯಾಗುವಾಗ ಬಹುಸಂಖ್ಯಾತ ಹಿಂದುಗಳಿರುವ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಉಲ್ಲೇಖಿಸುವುದು ಸೂಕ್ತ,” ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಕೆಲವೇ ಗಂಟೆಗಳಿಗೆ ಮುನ್ನ ಸಿಎನ್ಎನ್ಗೆ ನೀಡಿದ್ದ ಸಂದರ್ಶನದಲ್ಲಿ ಒಬಾಮ ಹೇಳಿರುವುದು ಭಾರತ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತವು ಅಮೆರಿಕಾದೊಂದಿಗಿನ ತನ್ನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಯತ್ನದಲ್ಲಿರುವಾಗ ಮಾಜಿ ಅಧ್ಯಕ್ಷರೊಬ್ಬರಿಂದ ಬಂದ ಈ ಹೇಳಿಕೆಯಿಂದ ತಮಗೆ ಆಘಾತವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
“ಆರು ಮುಸ್ಲಿಂ ಬಾಹುಳ್ಯದ ದೇಶಗಳ ಮೇಲೆ 26,000 ಕ್ಕೂ ಹೆಚ್ಚು ಬಾಂಬ್ ಬಳಸಿ ದಾಳಿ ಅವರ ಆಡಳಿತದ ಸಂದರ್ಭ ನಡೆದಿತ್ತು. ಅವರ ಆರೋಪಗಳನ್ನು ಜನರು ಹೇಗೆ ನಂಬುತ್ತಾರೆ?” ಎಂದು ಸೀತಾರಾಮನ್ ಪ್ರಶ್ನಿಸಿದರು.
ಮೋದಿ ಅವರು ಪ್ರಧಾನಿಯಾದ ನಂತರ ಅವರು ಪಡೆದ 13 ಪ್ರಶಸ್ತಿಗಳ ಪೈಕಿ ಆರು ಪ್ರಶಸ್ತಿಗಳು ಮುಸ್ಲಿಂ ಬಾಹುಳ್ಯ ದೇಶಗಳಿಂದ ದೊರಕಿದೆ ಎಂದೂ ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆ ಬರುವುದಕ್ಕಿಂತ ಮುಂಚೆ ಕಳೆದ ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಕೂಡ ಒಬಾಮ ಅವರನ್ನು ಟೀಕಿಸಿ “ಹುಸೇನ್ ಒಬಾಮ” ಎಂದು ಉಲ್ಲೇಖಿಸಿದ್ದರು.
ಅಮೆರಿಕಾದ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ವಿರೋಧಿಸಿ ಗುವಹಾಟಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆಯೇ ಎಂದು ಪತ್ರಕರ್ತರೊಬ್ಬರು ವಿಡಂಬನಾತ್ಮಕವಾಗಿ ಕೇಳಿದ ಪ್ರಶ್ನೆಗೆ ಸರ್ಮ ಮೇಲಿನಂತೆ ಉತ್ತರಿಸಿದ್ದರು.