ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದ ಡೊನಾಲ್ಡ್ ಟ್ರಂಪ್

File Photo: PTI
ಹೊಸದಿಲ್ಲಿ: ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಕರೆ ಮಾಡಿದ ಡೊನಾಲ್ಡ್ ಟ್ರಂಪ್, ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದರಲ್ಲದೆ, ರಶ್ಯ –ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳ್ಳಲು ಬೆಂಬಲ ನೀಡುತ್ತಿರುವುದಕ್ಕೆ ಧನ್ಯವಾದವನ್ನೂ ಸಲ್ಲಿಸಿದರು.
ಇತ್ತೀಚಿನ ಮಾತುಕತೆಗಳಲ್ಲಿ ಇಬ್ಬರೂ ನಾಯಕರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದರು ಹಾಗೂ ಭಾರತ ಮತ್ತು ಅಮೆರಿಕ ನಡುವೆ ಬಿರುಕು ಬಿಟ್ಟಿರುವ ಸಂಬಂಧವನ್ನು ಮತ್ತೆ ಸುಧಾರಿಸುವ ಸೂಚನೆ ನೀಡಿದ್ದರು.
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಮಾತುಕತೆ ಮುಗಿದ ಕೆಲವೇ ಗಂಟೆಗಳ ಅವಧಿಯಲ್ಲಿ ವಾಷಿಂಗ್ಟನ್ ಡಿಸಿಯಿಂದ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಕರೆ ಬಂದಿತು ಎಂದು ವರದಿಯಾಗಿದೆ.
ಬಳಿಕ, ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನರೇಂದ್ರ ಮೋದಿ, “ನಿಮ್ಮ ದೂರವಾಣಿ ಕರೆ ಹಾಗೂ ನನ್ನ ಜನ್ಮದಿನಕ್ಕೆ ನೀವು ಹಾರೈಸಿದ ಶುಭಾಶಯಕ್ಕೆ ಧನ್ಯವಾದಗಳು ನನ್ನ ಗೆಳೆಯ, ಅಧ್ಯಕ್ಷ ಡೊನಾಲ್ಡ್ ಟ್ರಂಪ್. ನಾನೂ ನಿಮ್ಮಂತೆಯೇ, ಭಾರತ ಮತ್ತು ಅಮೆರಿಕದ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಯಕೆ ಹೊಂದಿದ್ದೇನೆ” ಎಂದು ಹೇಳಿದ್ದಾರೆ.





