ಇರಾನ್ ವಿರುದ್ಧ ಕ್ರಮದ ಭಾಗವಾಗಿ ಭಾರತದ ಎಂಟು ಕಂಪನಿಗಳು, ಐವರು ಪ್ರಜೆಗಳ ವಿರುದ್ಧ ಅಮೆರಿಕದ ನಿರ್ಬಂಧ

ಸಾಂದರ್ಭಿಕ ಚಿತ್ರ (Grok)
ಹೊಸದಿಲ್ಲಿ: ಇರಾನ್ ವಿರುದ್ಧ ಹೇರಲಾಗಿರುವ ನಿರ್ಬಂಧಕ್ಕೆ ಸಂಬಂಧಿಸಿದಂತೆ ತನ್ನ ಇತ್ತೀಚಿನ ಕ್ರಮದ ಭಾಗವಾಗಿ ಅಮೆರಿಕವು ಆ ದೇಶದಿಂದ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವ ಎಂಟು ಭಾರತೀಯ ಕಂಪನಿಗಳು ಹಾಗೂ ಮುಹಮ್ಮದ್ ಹುಸೇನ್ ಶಮ್ಖಾನಿ ಅವರ ನಿಯಂತ್ರಣದಲ್ಲಿರುವ ಹಡಗು ಸಾಮ್ರಾಜ್ಯದ ಭಾಗವಾಗಿ ಗುರುತಿಸಿಕೊಂಡಿರುವ ಐವರು ಭಾರತೀಯ ಪ್ರಜೆಗಳ ವಿರುದ್ಧ ನಿರ್ಬಂಧಗಳನ್ನು ಹೇರಿದೆ. ಶಮ್ಖಾನಿ ಇರಾನಿನ ಸರ್ವೋಚ್ಚ ನಾಯಕನ ಉನ್ನತ ರಾಜಕೀಯ ಸಲಹೆಗಾರ ಅಲಿ ಶಮ್ಖಾನಿಯವರ ಪುತ್ರರಾಗಿದ್ದಾರೆ.
ಬುಧವಾರ ಪ್ರಕಟಿಸಲಾದ ಇತ್ತೀಚಿನ ಕ್ರಮದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯು ವಿಶ್ವಾದ್ಯಂತದ 20 ಕಂಪನಿಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದು, 10 ಹಡಗುಗಳನ್ನು ನಿರ್ಬಂಧಿತ ಆಸ್ತಿ ಎಂದು ಗುರುತಿಸಿದೆ. ಇದೇ ವೇಳೆ ಅಮೆರಿಕದ ಹಣಕಾಸು ಸಚಿವಾಲಯದ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿ(ಒಎಫ್ಎಸಿ)ಯು 50ಕ್ಕೂ ಅಧಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದು, ಹುಸೇನ್ ಶಮ್ಖಾನಿ ಜಾಲದ 50ಕ್ಕೂ ಅಧಿಕ ಹಡಗುಗಳನ್ನು ಗುರುತಿಸಿದೆ.
ಆರು ಭಾರತೀಯ ಕಂಪನಿಗಳಾದ ಕಂಚನ್ ಪಾಲಿಮರ್ಸ್, ಅಲ್ಕೆಮಿಕಲ್ ಸೊಲ್ಯೂಷನ್ಸ್ (ಕೆಮ್ಫಾರ್ಮ್ ಟ್ರೇಡಿಂಗ್ ಎಂದೂ ಕರೆಯಲಾಗುತ್ತದೆ), ರಮಣಿಕಲಾಲ ಎಸ್.ಗೋಸಾಲಿಯಾ ಆ್ಯಂಡ್ ಕಂಪನಿ, ಜ್ಯುಪಿಟರ್ ಡೈ ಕೆಮ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಮತ್ತು ಪರ್ಸಿಸ್ಟಂಟ್ ಪೆಟ್ರೋಕೆಮ್ ಇವು ಅಮೆರಿಕದ ನಿರ್ಬಂಧಕ್ಕೆ ಒಳಗಾಗಿವೆ. ವಿದೇಶಾಂಗ ಇಲಾಖೆಯ ಪ್ರಕಾರ ಈ ಕಂಪನಿಗಳು ಅಮೆರಿಕದ ನಿರ್ಬಂಧಗಳಡಿ ಇರುವ ಇರಾನ್ ಮೂಲದ ಪೆಟ್ರೋಕೆಮಿಕಲ್ಗಳನ್ನು ಆಮದು ಮಾಡಿಕೊಂಡಿವೆ. ಶಮ್ಖಾನಿ ಜಾಲದ ಭಾಗವೆಂದು ಪರಿಗಣಿಸಲಾಗಿರುವ ವ್ಯಕ್ತಿಗಳೊಂದಿಗೆ ಸಂಪರ್ಕದ ಆರೋಪದಲ್ಲಿ ಇನ್ನೂ ಎರಡು ಭಾರತೀಯ ಕಂಪನಿಗಳಾದ ಎನ್ಸಾ ಶಿಪ್ ಮ್ಯಾನೇಜ್ಮೆಂಟ್ ಮತ್ತು ಶ್ರೀಜಿ ಜೆಮ್ಸ್ ಕೂಡ ನಿರ್ಬಂಧದ ಪಟ್ಟಿಯಲ್ಲಿವೆ.
ಮುಹಮ್ಮದ್ ರಫೀಕ್ ಹಬೀಬುಲ್ಲಾ, ಜಾಕೋಬ್ ಕುರಿಯನ್, ಅನಿಲ ಕುಮಾರ ಪಾಣಕ್ಕಲ್ ನಾರಾಯಣನ್ ನಾಯರ್, ಪಂಕಜ್ ನಾಗಜಿಭಾಯಿ ಪಟೇಲ್ ಮತ್ತು ಇಲ್ಯಾಸ್ ಜಾಫರ್ ತಾಂಬೆ ಅವರು ನಿರ್ಬಂಧಕ್ಕೆ ಗುರಿಯಾಗಿರುವ ಐವರು ಭಾರತೀಯ ಪ್ರಜೆಗಳಾಗಿದ್ದಾರೆ.
ಯುಎಇಯಲ್ಲಿ ನೆಲೆಸಿರುವ ಹಬೀಬುಲ್ಲಾ ಅವರನ್ನು ಇರಾನ್ ಆರ್ಥಿಕತೆಯ ಪೆಟ್ರೋಲಿಯಂ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕಾಗಿ ಹಾಗೂ ನೈಜೀರಿಯಾದಲ್ಲಿ ವಾಸವಿರುವ ಕುರಿಯನ್ ಮತ್ತು ಭಾರತದ ನಿವಾಸಿ ನಾಯರ್ ಅವರು ಮಾರ್ಷಲ್ ದ್ವೀಪದಲ್ಲಿರುವ ನಿಯೋ ಶಿಪ್ಪಿಂಗ್ನ ಶೇರುದಾರರು ಮತ್ತು ನಿರ್ದೇಶಕರು ಎಂದು ಒಎಫ್ಎಸಿಯ ಪಟ್ಟಿಯಲ್ಲಿ ಸೇರಿದ್ದಾರೆ. ನಿಯೋ ಶಿಪ್ಪಿಂಗ್ ಶಮ್ಖಾನಿಯವರ ಜಾಲದ ಪರವಾಗಿ ನಿರ್ವಹಿಸಲ್ಪಡುತ್ತಿರುವ ಹಡಗಿನ ಒಡೆತನವನ್ನು ಹೊಂದಿದೆ. ಒಎಫ್ಎಸಿ ಪ್ರಕಾರ ಯುಎಇಯ ಪಟೇಲ್ ಶಮ್ಖಾನಿಯವರ ಜಾಲದಲ್ಲಿರುವ ಹಲವಾರು ಶಿಪ್ಪಿಂಗ್ ಕಂಪನಿಗಳಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಶ್ರೀಜಿ ಜೆಮ್ಸ್ನ ನಿರ್ದೇಶಕರಾಗಿದ್ದಾರೆ. ಯುಎಇಯಲ್ಲಿ ನೆಲೆಸಿರುವ ತಾಂಬೆ ಶಮ್ಖಾನಿಯವರ ಜಾಲಕ್ಕೆ ಸಂಬಂಧಿಸಿರುವ ಹಲವಾರು ಶಿಪ್ಪಿಂಗ್ ಕಂಪನಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಮತ್ತು ಜಾಲದ ಹಲವಾರು ಕಂಪನಿಗಳಲ್ಲಿ ವಿವಿಧ ಪಾತ್ರಗಳನ್ನು ಹೊಂದಿದ್ದಾರೆ.
ಇತ್ತೀಚಿನ ಕ್ರಮವು ಇರಾನ್ ಮೇಲೆ ಗರಿಷ್ಠ ಒತ್ತಡವನ್ನು ಹೇರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಭಿಯಾನದ ಭಾಗವಾಗಿದೆ. ಇದಕ್ಕೂ ಮುನ್ನ ಹಲವಾರು ಸುತ್ತುಗಳಲ್ಲಿ ಅಮೆರಿಕವು ಭಾರತೀಯ ಪ್ರಜೆಗಳು ಸೇರಿದಂತೆ ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು.
ಇಂಧನ ವಲಯಕ್ಕೆ ಸಂಬಂಧಿಸಿದ ನಿರ್ಬಂಧಗಳ ಉಲ್ಲಂಘನೆಗಾಗಿ ಅಮೆರಿಕದಿಂದ ನಿರ್ಬಂಧಕ್ಕೆ ಗುರಿಯಾಗಿರುವ ಹೆಚ್ಚಿನ ಭಾರತೀಯ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಸ್ಥಾಪನೆಗೊಂಡಿದ್ದು,ಅವು ಈವರೆಗೆ ಹೆಚ್ಚು ಪರಿಚಿತವಲ್ಲದ ಸಣ್ಣ ಕಂಪನಿಗಳಾಗಿವೆ.







