ಅಮೆರಿಕದ ಸುಂಕದಿಂದ ಭಾರತೀಯ ಸಾಗರೋತ್ಪನ್ನಗಳ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ: ರಫ್ತುದಾರರ ಕಳವಳ

ಸಾಂದರ್ಭಿಕ ಚಿತ್ರ (PTI)
ಅಮರಾವತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿರುವ ಪ್ರತಿ ಸುಂಕದಿಂದಾಗಿ ಅಮೆರಿಕ ಮಾರುಕಟ್ಟೆಗೆ ಆಗುತ್ತಿರುವ ಭಾರತೀಯ ಸಾಗರೋತ್ಪನ್ನಗಳ ರಫ್ತಿನ ಮೇಲೆ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮವುಂಟಾಗಲಿದೆ ಎಂದು ರವಿವಾರ ಭಾರತೀಯ ಸಾಗರೋತ್ಪನ್ನಗಳ ರಫ್ತುದಾರರ ಒಕ್ಕೂಟದ ಅಧ್ಯಕ್ಷ ಪವನ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕಕ್ಕೆ ಭಾರತದಿಂದ ರಫ್ತಾಗುತ್ತಿರುವ ಸಾಗರೋತ್ಪನ್ನಗಳ ಮೌಲ್ಯ 2023-24ನೇ ಅವಧಿಯಲ್ಲಿ 2.5 ಶತಕೋಟಿ ಡಾಲರ್ ನಷ್ಟಿತ್ತು.
ಅಮೆರಿಕಕ್ಕೆ ರಫ್ತಾಗುತ್ತಿರುವ ಒಟ್ಟು ಸಾಗರೋತ್ಪನ್ನಗಳ ರಫ್ತಿನಲ್ಲಿ ಸೀಗಡಿಯದ್ದು ಸಿಂಹಪಾಲಾಗಿದ್ದು, ಶೇ. 92ರಷ್ಟಾಗಿದೆ. ಅಲ್ಲದೆ, ಅಮೆರಿಕಕ್ಕೆ ಸೀಗಡಿ ರಫ್ತು ಮಾಡುತ್ತಿರುವ ಎರಡನೆ ಅತಿ ದೊಡ್ಡ ದೇಶ ಭಾರತವಾಗಿದೆ ಎಂದು ಪವನ್ ಕುಮಾರ್ ತಿಳಿಸಿದ್ದಾರೆ.
“ಈ ಪ್ರತಿಸುಂಕದಿಂದಾಗಿ ಮೌಲ್ಯ ಸರಪಣಿಯ ಎಲ್ಲ ಪಾಲುದಾರರಿಗೆ ಹಾನಿಯಾಗಲಿದೆ ಹಾಗೂ ಪೂರ್ಣಪ್ರಮಾಣದ ತೊಂದರೆಯನ್ನುಂಟು ಮಾಡಲಿದೆ” ಎಂದೂ ಅವರು ಹೇಳಿದ್ದಾರೆ.
ದಕ್ಷಿಣ ಅಮೆರಿಕ ದೇಶವಾದ ಈಕ್ವೆಡಾರ್ ಗೆ ಹೋಲಿಸಿದರೆ, ಭಾರತದ ರಪ್ತು ಸಾಧನೆಯು ಪ್ರತಿ ಸುಂಕದಿಂದಾಗಿ ತತ್ತರಿಸಲಿದೆ. ಈಕ್ವೆಡಾರ್ ಗೆ ಕೇವಲ ಶೇ. 10ರಷ್ಟು ಪ್ರತಿ ಸುಂಕ ವಿಧಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ವಿಯೆಟ್ನಾಂಗೆ ಶೇ. 46ರಷ್ಟು ಪ್ರತಿ ಸುಂಕ ಹಾಗೂ ಇಂಡೊನೇಶಿಯಾಗೆ ಶೇ. 32ರಷ್ಟು ಪ್ರತಿ ಸುಂಕ ವಿಧಿಸಲಾಗುತ್ತಿದೆ. ಇದರಿಂದಾಗಿ, ದಕ್ಷಿಣ ಅಮೆರಿಕದ ದೇಶಕ್ಕೆ ಭಾರಿ ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿಶಾಖಪಟ್ಟಣಂ ಮೂಲದ ರಫ್ತುದಾರರಾದ ಪವನ್ ಕುಮಾರ್ ಪ್ರಕಾರ, ಭಾರತದ ಮೇಲೆ ವಿಧಿಸಲಾಗಿರುವ ಭಾರಿ ಪ್ರತಿ ಸುಂಕದಿಂದಾಗಿ, ಅಮೆರಿಕಕ್ಕೆ ಸೀಗಡಿ ರಫ್ತು ಮಾಡುತ್ತಿರುವ ಅತಿ ದೊಡ್ಡ ದೇಶವಾದ ಭಾರತದ ಸ್ಥಾನವನ್ನು ಈಕ್ವೆಡಾರ್ ಆಕ್ರಮಿಸಲಿದೆ ಎನ್ನಲಾಗಿದೆ.
“ಶೇ. 16ರಷ್ಟು ಪ್ರಮಾಣದ ಲಾಭಾಂಶವನ್ನು ಜೀರ್ಣಿಸಿಕೊಳ್ಳುವುದು ಹಾಗೂ ಈಕ್ವೆಡಾರ್ ನ ಉತ್ಪಾದನೆಯೊಂದಿಗೆ ಸ್ಪರ್ಧಿಸುವುದು ಭಾರತೀಯ ಸಾಗರೋತ್ಪನ್ನಗಳ ರಫ್ತುದಾರರಿಗೆ ಕಷ್ಟವಾಗಲಿದೆ. ಸದ್ಯ ಈ ವಲಯದಲ್ಲಿ ದೊರೆಯುತ್ತಿರುವ ಲಾಭಾಂಶದ ಪ್ರಮಾಣ ಶೇ. 4-5ರಷ್ಟು ಮಾತ್ರವಾಗಿದೆ” ಎಂದು ಅವರು ಹೇಳಿದ್ದಾರೆ.
ಸದ್ಯ ಅಮೆರಿಕ ಮಾರುಕಟ್ಟೆಗೆ 2,000 ಕಂಟೈನರ್ ಗಳ ಸಾಗರೋತ್ಪನ್ನಗಳು ಸಾಗಣೆಯಲ್ಲಿರುವಾಗಲೇ, ಎಪ್ರಿಲ್ 9ರಿಂದ ಈ ಭಾರಿ ಪ್ರಮಾಣದ ಪ್ರತಿ ಸುಂಕಗಳು ಜಾರಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.







