ವಿಮಾನಗಳಲ್ಲಿ ಇನ್ನು ಪವರ್‌ಬ್ಯಾಂಕ್ ಬಳಕೆ ನಿಷೇಧ: ಡಿಜಿಸಿಎ ಹೊಸ ಮಾರ್ಗಸೂಚಿ

ಹೊಸದಿಲ್ಲಿ: ವಿಮಾನಗಳಲ್ಲಿ ಇನ್ನು ಪ್ರಯಾಣಿಕರು ಎಲೆಕ್ಟ್ರಾನಿಕ್ ಸಾಧನಗಳಿಗೆ ಪವರ್‌ಬ್ಯಾಂಕ್ ಬಳಸುವುದನ್ನು ನಿಷೇಧಿಸಲಾಗಿದೆ. ವಿಮಾನ ಪ್ರಯಾಣಿಕರ ಆಸನಗಳಿಗೆ ವಿದ್ಯುತ್ ಪೂರೈಕೆ ಒದಗಿಸುವ ವ್ಯವಸ್ಥೆಗೆ ಪ್ಲಗ್ ಮಾಡಿ ಪವರ್‌ಬ್ಯಾಂಕ್ ಚಾರ್ಜ್ ಮಾಡುವುದಕ್ಕೆ ಕೂಡಾ ಇನ್ನು ಮೇಲೆ ಅವಕಾಶ ಇರುವುದಿಲ್ಲ.
ಪವರ್‌ಬ್ಯಾಂಕ್ ಗಳನ್ನು ಹ್ಯಾಂಡ್ ಬ್ಯಾಗ್ ನಲ್ಲಿ ಮಾತ್ರವೇ ಒಯ್ಯಲು ಅವಕಾಶವಿದ್ದು, ಮೇಲಿನ ಬಿನ್ ಗಳಲ್ಲಿ ಪವರ್‌ಬ್ಯಾಂಕ್ ಹಾಗೂ ಬ್ಯಾಟರಿಗಳನ್ನು ಇರಿಸುವಂತಿಲ್ಲ. ಲಿಥಿಯಂ ಬಾಟರಿಗಳಿಗೆ ವಿಮಾನಯಾನದ ಮಧ್ಯವೇ ಬೆಂಕಿ ಹತ್ತಿಕೊಳ್ಳುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಡಿಜಿಸಿಎ ಇತ್ತೀಚೆಗೆ 'ಅಪಾಯಕಾರಿ ಸರಕುಗಳ ಮಾರ್ಗಸೂಚಿ ಸುತ್ತೋಲೆ'ಯನ್ನು ಬಿಡುಗಡೆ ಮಾಡಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಯಾಣದ ವೇಳೆ ಒಯ್ಯುವ ಲಿಥಿಯಂ ಬ್ಯಾಟರಿ ಚಾಲಿತ ಸಾಧನಗಳಿಂದ ಅಪಾಯ ಸಾಧ್ಯತೆ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ.
ಹೊಸ ನಿಯಮಾವಳಿಯ ಬಗ್ಗೆ ವಿಮಾನದ ಸೇವಾ ಸಿಬ್ಬಂದಿ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡುವಂತೆಯೂ ವಿಮಾನಯಾನ ನಿಯಂತ್ರಣ ಸಂಸ್ಥೆ ಸ್ಪಷ್ಟ ಸೂಚನೆ ನೀಡಿದೆ. ಯಾವುದೇ ಸಾಧನಗಳು ಉಷ್ಣ, ಹೊಗೆ ಅಥವಾ ಅಸಹಜ ವಾಸನೆಯನ್ನು ಹೊರ ಸೂಸುವ ಸಂದರ್ಭದಲ್ಲಿ ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡುವುದು ಕಡ್ಡಾಯ. ವಿಮಾನಯಾನ ಸಂಸ್ಥೆಗಳು ಪ್ರಾಮಾಣಿಕವಾಗಿ ಲಿಥಿಯಂ ಬ್ಯಾಟರಿ ಘಟನಾವಳಿಗಳಿಗೆ ಸಂಬಂಧಿಸಿದ ಎಲ್ಲ ಸುರಕ್ಷಾ ಸಮಸ್ಯೆಗಳನ್ನು ವರದಿ ಮಾಡಬೇಕು ಎಂದು ಕೂಡಾ ಡಿಜಿಸಿಎ ಸ್ಪಷ್ಟಪಡಿಸಿದೆ.







