ಗರ್ಭಧಾರಣೆ ಕುರಿತು ಕೃತಿಯಲ್ಲಿ ‘ಬೈಬಲ್’ ಪದದ ಬಳಕೆ: ನಟಿ ಕರೀನಾ ಕಪೂರ್ಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಕರೀನಾ ಕಪೂರ್ | PC : X
ಭೋಪಾಲ: ಗರ್ಭಧಾರಣೆ ಕುರಿತು ತನ್ನ ಕೃತಿಯ ಶೀರ್ಷಿಕೆಯಲ್ಲಿ ‘ಬೈಬಲ್’ ಪದವನ್ನು ಬಳಸಿದ್ದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನಟಿ ಕರೀನಾ ಕಪೂರ್ ಖಾನ್ ಅವರಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನೋಟಿಸನ್ನು ಹೊರಡಿಸಿದೆ.
‘ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್’ ಕೃತಿಯಲ್ಲಿ ಬೈಬಲ್ ಪದವನ್ನು ಬಳಸುವ ಮೂಲಕ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ನಟಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ವಕೀಲ ಕ್ರಿಸ್ಟೋಫರ್ ಆ್ಯಂಥನಿ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ನ್ಯಾಯಾಲಯವು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆ್ಯಂಥನಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ಕೃತಿಯನ್ನು ನಿಷೇಧಿಸುವಂತೆ ಮತ್ತು ಶೀರ್ಷಿಕೆಯಿಂದ ‘ಬೈಬಲ್’ ಪದವನ್ನು ತೆಗೆಯುವಂತೆ ಅವರು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಗುರುವಾರ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ನ್ಯಾ.ಜಿ.ಎಸ್.ಅಹ್ಲುವಾಲಿಯಾ ಅವರು ಕರೀನಾ ಜೊತೆಗೆ ಸಹಲೇಖಕಿ ಅದಿತಿ ಶಾ ಭಿಮ್ಜಿಯಾನಿ, ಅಮೆಝಾನ್ ಆನ್ಲೈನ್ ಶಾಪಿಂಗ್, ಪ್ರಕಾಶಕ ಜಗ್ಗರ್ನಾಟ್ ಬುಕ್ಸ್,ಮಧ್ಯಪ್ರದೇಶ ಸರಕಾರ,ಜಬಲ್ಪುರ ಎಸ್ಪಿ ಮತ್ತಿತರರಿಗೂ ನೋಟಿಸ್ಗಳನ್ನು ಹೊರಡಿಸಿದ್ದಾರೆ.
ಖಾನ್ ಅವರ ಕೃತಿಯು ಆಗಸ್ಟ್ 2021ರಲ್ಲಿ ಬಿಡುಗಡೆಗೊಂಡಿತ್ತು.







