ಹೆದ್ದಾರಿಗಳಲ್ಲಿ ಸಿಗ್ನಲ್ ಜಂಪ್ ಗಿಂತ ಮೊಬೈಲ್ ಫೋನ್ ಬಳಸುವುದರಿಂದಲೇ ಹೆಚ್ಚು ಸವಾರರು ಮೃತಪಟ್ಟಿದ್ದಾರೆ : ವರದಿ
Photo : META AI
ಹೊಸದಿಲ್ಲಿ : ಭಾರತದ ಹೆದ್ದಾರಿಗಳಲ್ಲಿ ಚಾಲನೆ ಮಾಡುವಾಗ ಸಿಗ್ನಲ್ ಜಂಪ್ ಗಿಂತ ಮೊಬೈಲ್ ಫೋನ್ ಬಳಸುವುದರಿಂದಲೇ ನಾಲ್ಕು ಪಟ್ಟು ಹೆಚ್ಚು ಮೃತ್ಯುಗಳಾಗುತ್ತಿವೆ ಎಂದು ವರದಿಯೊಂದರಲ್ಲಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಕಾನೂನಿನ ದುರ್ಬಲ ಜಾರಿ ಹಾಗೂ ಅಪಾಯಕಾರಿ ವರ್ತನೆಯ ಬಗೆಗಿನ ಸಹಿಷ್ಣುತೆ ಕುರಿತು ಈ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಭಾರತದ ಹೆದ್ದಾರಿಗಳಲ್ಲಿ ಸಂಭವಿಸುವ ಮೃತ್ಯುಗಳ ಪೈಕಿ ರಸ್ತೆಯ ನೋ ಎಂಟ್ರಿಯಲ್ಲಿ ವಾಹನ ಚಲಾಯಿಸುವುದು, ಮದ್ಯ ಸೇವನೆ ಮಾಡಿ ಚಾಲನೆ ಮಾಡುವುದು ಹಾಗೂ ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸುವುದರಿಂದ ಒಟ್ಟಾರೆಯಾಗಿ ಶೇ. 10ರಷ್ಟು ಮಾರಣಾಂತಿಕ ಅಪಘಾತ ಪ್ರಕರಣಗಳು ಸಂಭವಿಸುತ್ತವೆ ಎಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ಕುರಿತು ನಡೆಸಲಾಗಿರುವ ಅಧ್ಯಯನದಿಂದ ಬಹಿರಂಗಗೊಂಡಿದೆ.
ಹೆದ್ದಾರಿಗಳಲ್ಲಿ ಸಂಭವಿಸುವ ಮೃತ್ಯುಗಳ ಪೈಕಿ ಅತಿವೇಗದ ಚಾಲನೆಯಿಂದ ಶೇ. 75ರಷ್ಟು ಪ್ರಕರಣಗಳು ಸಂಭವಿಸುತ್ತವೆ ಎಂದು ಹೊಸ ದಿಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಸಂಶೋಧಕರು ಹೇಳಿದ್ದಾರೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ 15ನೇ ಗಾಯ ತಡೆ ಮತ್ತು ಸುರಕ್ಷತಾ ಉತ್ತೇಜನ ವಿಶ್ವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಈ ವರದಿಯನ್ನು ಮಂಡಿಸಲಾಗಿದೆ.
“ಭಾರತದಲ್ಲಿ ಸಮಗ್ರ ರಸ್ತೆ ಸುರಕ್ಷತಾ ಕಾನೂನುಗಳಿದ್ದರೂ, ಅದರ ಜಾರಿ ಸಮಪರ್ಕವಾಗಿಲ್ಲ” ಎಂದು ಐಐಟಿ ದಿಲ್ಲಿಯಲ್ಲಿನ ಸಾರಿಗೆ ಸಂಶೋಧನೆ ಮತ್ತು ಗಾಯ ತಡೆ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾ ಪಕರು ಹಾಗೂ ಈ ಅಧ್ಯಯನದ ಸಹ ಲೇಖಕರಾದ ದೀಪ್ತಿ ಜೈನ್ ಅಭಿಪ್ರಾಯ ಪಡುತ್ತಾರೆ.
ಭಾರತ, ಆಸ್ಟ್ರೇಲಿಯಾ, ಬ್ರೆಝಿಲ್, ಕೆನಡಾ ಮತ್ತು ಥಾಯ್ಲೆಂಡ್ ನಲ್ಲಿನ ರಸ್ತೆ ಸುರಕ್ಷತೆ ಹಾಗೂ ಅವುಗಳ ಅನುಷ್ಠಾನದ ವಿಧವನ್ನು ವಿಶ್ಲೇಷಿಸಿರುವ ಜೈನ್ ಮತ್ತು ಆಕೆಯ ಸಹೋದ್ಯೋಗಿ ಗಿರೀಶ್ ಅಗರ್ವಾಲ್ ಹಾಗೂ ಸಂಶೋಧನಾ ವಿದ್ವಾಂಸ ಮನೋಜ್ ಕುಮಾರ್, ನಿರ್ದಿಷ್ಟ ದೇಶಗಳಲ್ಲಿ ಇರುವ ವಿಭಿನ್ನ ವಿಧಗಳನ್ನು ಪತ್ತೆ ಹಚ್ಚಿದ್ದಾರೆ.
ಭಾರತದಲ್ಲಿ ರಸ್ತೆ ಸುರಕ್ಷತಾ ಕಾನೂನುಗಳ ಅಸ್ಥಿರ ಅನುಷ್ಠಾನವು ಭಾರಿ ಪ್ರಮಾಣದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.