ಉತ್ತರಪ್ರದೇಶ: ತೋಳಗಳ ದಾಳಿಯಿಂದ ಕಂಗೆಟ್ಟ ಜನ; ಶಾಲೆ, ಮಾರುಕಟ್ಟೆಗಳು ಬಂದ್

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಹ್ಸಿ ಪ್ರದೇಶದಲ್ಲಿ ತೋಳಗಳು ಮಾನವನ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಜನಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ.
ಮಹ್ಸಿ ಪ್ರದೇಶದಲ್ಲಿ ಮಕ್ಕಳು ಭಯದಿಂದ ಮನೆಯಿಂದ ಹೊರಗಿಳಿಯುತ್ತಿಲ್ಲ, ಶಾಲೆಗಳು ನಿರ್ಜನವಾಗಿವೆ. ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ದನಗಳು ಮತ್ತು ಪಕ್ಷಿಗಳಿಂದ ರಕ್ಷಿಸಲು ಹೊಲಗಳಿಗೆ ಹೋಗುವುದಿಲ್ಲ. ಮಾರುಕಟ್ಟೆಗಳು ಹೆಚ್ಚಾಗಿ ಮುಚ್ಚಲ್ಪಟ್ಟಿವೆ. ಹಳ್ಳಿಗರು ಕೆಲವು ಸೀಮಿತ ಅಂಗಡಿಗಳಿಂದ ಮೂಲ ದಿನಸಿಗಳನ್ನು ಖರೀದಿಸುತ್ತಿದ್ದಾರೆ.
ಮಹ್ಸಿ ಉಪವಿಭಾಗದಲ್ಲಿ ತೋಳಗಳು ಇಲ್ಲಿಯವರೆಗೆ 8 ಮಕ್ಕಳು ಸೇರಿದಂತೆ 9 ಜನರನ್ನು ದಾಳಿ ಮಾಡಿ ಕೊಂದಿದೆ, ಈ ಪ್ರದೇಶದಲ್ಲಿ 24 ಮಂದಿ ತೋಳಗಳ ದಾಳಿಯಿಂದ ಗಾಯಗೊಂಡಿದ್ದಾರೆ.
ಈ ಬಗ್ಗೆ ರೋಲಿ ಸಿಂಗ್ ಎಂಬವರು ಮಾತನಾಡಿ, ನಾನು ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದೇನೆ. ಮಕ್ಕಳು ಸುರಕ್ಷಿತವಾದ್ದರೆ, ಭವಿಷ್ಯದಲ್ಲಿ ಅವರಿಗೆ ಅಧ್ಯಯನ ಮಾಡಲು ಅವಕಾಶವಿದೆ ಎಂದು ಹೇಳಿದ್ದಾರೆ.
ರೈತ ಹಜಾರಿ ಆರ್ಯ ಮಾತನಾಡುತ್ತಾ, ರಾತ್ರಿ ಹೊತ್ತು ತೋಳಗಳ ಭಯದಿಂದ ಕಾದು ಕುಳಿತು ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಮಕ್ಕಳು ಮತ್ತು ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಗ್ರಾಮಸ್ಥರು ಗುಂಪುಗಳಾಗಿ ಗಸ್ತು ತಿರುಗುತ್ತಿದ್ದಾರೆ. ಆದರೂ, ಬುಧವಾರ ತಡರಾತ್ರಿ ಹರ್ಡಿಯ ಪಚ್ದೇವರಿ ಗ್ರಾಮದ ಮನೆಯೊಂದರ ಅಂಗಳದಲ್ಲಿ ಕಟ್ಟಿಹಾಕಿದ್ದ ಮೇಕೆಗಳ ಮೇಲೆ ತೋಳಗಳು ದಾಳಿ ಮಾಡಿದೆ. ಇದರ ಬೆನ್ನಲ್ಲಿ ಅರಣ್ಯ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ.
ತೋಳಗಳ ಸರಣಿ ದಾಳಿಗಳನ್ನು ಗಮನಿಸಿ ಬಿಕ್ಕಟ್ಟನ್ನು ಪರಿಹರಿಸಲು ಡೆಹ್ರಾಡೂನ್ನ ವೈಲ್ಡ್ಲೈಪ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ನಾಲ್ವರು ಸದಸ್ಯರ ತಂಡವು ಮಂಗಳವಾರ ರಾತ್ರಿ ಬಹ್ರೈಚ್ಗೆ ತೆರಳಿದೆ. ತೋಳಗಳ ದಾಳಿಯ ಮಾದರಿಯನ್ನು ಅಧ್ಯಯನ ಮಾಡಲು, ಅವುಗಳನ್ನು ಸೆರೆಹಿಡಿಯುವ ಬಗ್ಗೆ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಮನುಷ್ಯ-ಪ್ರಾಣಿಗಳ ನಡುವಿನ ಸಂಘರ್ಷವನ್ನು ತಗ್ಗಿಸುವ ಕುರಿತು ಈ ಸಮಿತಿ ಅಧ್ಯಯನವನ್ನು ನಡೆಸಲಿದೆ.
ಮಹ್ಸಿಯಲ್ಲಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಹ್ರೈಚ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ,
ರಾತ್ರಿ ಹಳ್ಳಿಗಳಲ್ಲಿ ಗಸ್ತು ತಿರುಗಲು ತಂಡವನ್ನು ನಿಯೋಜಿಸಲಾಗಿದೆ. ಈ ತಂಡದಲ್ಲಿ ಪಂಚಾಯತ್ ಸಹಾಯಕರು, ಪಂ.ಕಾರ್ಯದರ್ಶಿ, ಕಂದಾಯ ಅಧಿಕಾರಿ, ಶುಚಿತ್ವ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇರಲಿದ್ದಾರೆ. ಇವರು ಸ್ಥಳೀಯ ನಿವಾಸಿಗಳಲ್ಲಿಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಸ್ಥಳೀಯ ಆಡಳಿತವು ಸೋಲಾರ್ ದೀಪಗಳ ಅಳವಡಿಕೆಯನ್ನು ಪ್ರಾರಂಭಿಸಿದೆ. ಇದುವರೆಗೆ ಸುಮಾರು 120 ಸೋಲಾರ್ ದೀಪಗಳನ್ನು ವಿವಿಧ ಇಲಾಖೆಗಳ ನೆರವಿನೊಂದಿಗೆ ಅಳವಡಿಸಲಾಗಿದೆ.
ನಾವು ಪ್ರಾಥಮಿಕ ಶಾಲೆಗಳನ್ನು ಅಗತ್ಯವಿರುವವರಿಗೆ ತಾತ್ಕಾಲಿಕ ಆಶ್ರಯವನ್ನಾಗಿ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ವ್ಯಕ್ತಿಗೆ ತೊಂದರೆಗಳು ಎದುರಾದರೆ ಅಥವಾ ರಾತ್ರಿಯ ವೇಳೆ ವಸತಿ ಅಗತ್ಯವಿದ್ದರೆ ಅವರು ಪ್ರಾಥಮಿಕ ಶಾಲೆಗಳಲ್ಲಿ ಒದಗಿಸಲಾದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯು 6 ಕ್ಯಾಮೆರಾಗಳು ಮತ್ತು ಡ್ರೋನ್ಗಳನ್ನು ನಿಯೋಜಿಸಿದೆ ಮತ್ತು ಪ್ರಾಂತೀಯ ಸಶಸ್ತ್ರದಳದ 150 ಸಿಬ್ಬಂದಿಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿಯಾಗಿ, ಕಂದಾಯ ಇಲಾಖೆಯ 32 ತಂಡಗಳು ಮತ್ತು ಅರಣ್ಯ ಇಲಾಖೆಯ 25 ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಜನರಲ್ಲಿ ಮನೆಯೊಳಗೆ ಇರುವಂತೆ, ರಾತ್ರಿಯಲ್ಲಿ ಮನೆಯ ಬಾಗಿಲುಗಳನ್ನು ಲಾಕ್ ಮಾಡಲು ಮೆರೆಯದಂತೆ ಧ್ವನಿವರ್ಧಕಗಳಲ್ಲಿ ಜನರಿಗೆ ಸಲಹೆಯನ್ನು ನೀಡುತ್ತಿದ್ದಾರೆ.







